ಚಾಮರಾಜನಗರಕ್ಕೆ ಮೇ 1 ರಂದು ಪ್ರಧಾನಿ ಮೋದಿ ಆಗಮನ

ಬೆಂಗಳೂರು, ಎ. 29: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮೇ 1ರಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇ 1ರ ಬೆಳಗ್ಗೆ 11:30ಕ್ಕೆ ಚಾಮಜರಾನಗರ ಜಿಲ್ಲೆ ಸಂತೇಮರಹಳ್ಳಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿರುವ ಮೋದಿ, ಮಧ್ಯಾಹ್ನ ಉಡುಪಿಗೆ ಭೇಟಿ ನೀಡಿ, ಸಂಜೆ 3ಕ್ಕೆ ಎಂಜೆಎಂ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಬಳಿಕ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಸಂಜೆ 6.15ಕ್ಕೆ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು.
ಮೇ 3ಕ್ಕೆ ಆದಿತ್ಯನಾಥ್ ಆಗಮನ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇ 3 ಮತ್ತು 4ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ. ಮೇ 3ಕ್ಕೆ ಸಿರಸಿ, ಸಾಗರ, ಬಾಳೆಹೊನ್ನೂರು, ಶೃಂಗೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೇ 4 ರಂದು ಬೈಂದೂರು, ಭಟ್ಕಳ, ಕಾಪು, ಬಂಟ್ವಾಳ ಮತ್ತು ಸುರತ್ಕಲ್‌ನಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಸುದ್ಧಿಗೋಷ್ಠಿಯಲ್ಲಿ ಅನ್ವರ್ ಮಾಣಿಪಾಡಿ, ಶಾಂತರಾಮ್ ಹಾಜರಿದ್ದರು.







