ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ: ಮನೆ ಮನೆ ಭೇಟಿಗೆ ಮೊಯ್ದಿನ್ ಬಾವಾ ಚಾಲನೆ

ಮಂಗಳೂರು, ಎ. 29: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಪ್ರಕ್ರಿಯೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಮೊಯ್ದಿನ್ ಬಾವ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಮಂಗಳೂರಿನಲ್ಲಿ ಈಗಾಗಲೇ ಎಐಸಿಸಿ ಅಧ್ಯಕ್ಷ, ಪಕ್ಷದ ವರಿಷ್ಠ ರಾಹುಲ್ ಗಾಂಧಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಹಾಗೂ ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಕ್ಷೇತ್ರದ ಪ್ರಣಾಳಿಕೆಯನ್ನೂ ಜನರ ಮುಂದಿಡಲಾಗುವುದು ಎಂದರು.
ಸಿದ್ಧರಾಮಯ್ಯ ನೇತೃತ್ವದಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣಾ ಸಂದರ್ಭ ನೀಡಿರುವ ಪ್ರಣಾಳಿಕೆಯ ಬಹುತೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದಲ್ಲದೆ ಇಂದಿರಾ ಕ್ಯಾಂಟೀನ್ ಸೇರಿದಂತೆ ಇಂತಹ 37ಕ್ಕೂ ಅಧಿಕ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಇದರಿಂದಾಗಿ ನುಡಿದಂತೆ ನಡೆದ ಸರಕಾರ ಎಂಬುದನ್ನು ಜನರಿಗೆ ಮನವರಿಕೆ ಮಾಡಲಾಗುವುದು. ಮಾತ್ರವಲ್ಲದೆ ಕಳೆದ ಬಾರಿಯಂತೆ ಈ ಬಾರಿಯೂ ಪ್ರಣಾಳಿಕೆಯನ್ನು ನೀಡಿರುವ ಭರವಸೆಗಳನ್ನು ಯಥಾ ರೀತಿ ಅನುಷ್ಠಾನಗೊಳಿಸಲಾಗುವುದು ಎಂದು ಮೊಯ್ದಿನ್ ಬಾವ ನುಡಿದರು.
ಪಕ್ಷದ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಕವಿತಾ ಸನಿಲ್, ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕ್ಷೇತ್ರದ ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ ಉಪಸ್ಥಿತರಿದ್ದರು.





