ಮಂಗಳೂರು: ವಿಶ್ವ ಪುಸ್ತಕ ದಿನಾಚರಣೆ

ಮಂಗಳೂರು, ಎ.29: ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅಸಂಖ್ಯಾತ ಪದವೀಧರರನ್ನು ಸೃಷ್ಟಿಸಬಹುದು. ಆದರೆ ಅದರಿಂದ ಅಗತ್ಯವಾದ ಜೀವನ ಕೌಶಲ್ಯ ಸಿದ್ಧಿಸುವುದೆಂದು ಹೇಳಲಾಗದು. ನಮ್ಮ ಅರಿವಿನ ವಿಸ್ತರಣೆಗೆ ಬೇರೆ ಬೇರೆ ವಿಷಯಗಳ ಓದು ಅತ್ಯವಶ್ಯ. ಅದಕ್ಕಾಗಿ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು.ಇದರಿಂದ ಜ್ಞಾನ ವೃದ್ಧಿ ಸಾಧ್ಯ ಎಂದು ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಗರದ ಅಲ್- ರಹಬಾ ಪ್ಲಾಝಾ ಕಟ್ಟಡದಲ್ಲಿ ಜರಗಿದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಪ್ರಕಾರದ ಸಾಹಿತ್ಯ ಕೃತಿಗಳನ್ನು ಕೊಂಡು ಓದುವ ಪ್ರವೃತ್ತಿ ರೂಢಿಯಾದರೆ ಪುಸ್ತಕ ಪ್ರಪಂಚ ಹಿಗ್ಗುತ್ತದೆ. ಇದರೊಂದಿಗೆ ಮನೆ ಮನೆಗಳಲ್ಲಿ ಗ್ರಂಥ ಭಂಡಾರ ತೆರೆಯುವ ಮೂಲಕ ಎಳೆಯರಲ್ಲಿ ಓದುವ ಹವ್ಯಾಸವನ್ನು ಬೆಳೆಸಬಹುದು ಎಂದು ಭಾಸ್ಕರ ರೈ ಕುಕ್ಕುವಳ್ಳಿ ನುಡಿದರು.
ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಪ್ರಕಾಶ್ ಹಾಸ್ಯ ಕವಿಗೋಷ್ಠಿ ನಡೆಸಿಕೊಟ್ಟರು. ಕಸಾಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಿರಿಗನ್ನಡ ಮಾರಾಟ ಮಳಿಗೆಯ ಮಾರ್ಸೆಲ್ ಎಂ.ಡಿಸೋಜ ಸ್ವಾಗತಿಸಿದರು. ಮಹೇಶ್ ಆರ್. ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







