ಮೊದಲ ಬಾರಿಗೆ ಜಂಟಿ ಮಿಲಿಟರಿ ಕವಾಯತಿನಲ್ಲಿ ಭಾರತ,ಪಾಕ್,ಚೀನಾ

ಹೊಸದಿಲ್ಲಿ,ಎ.29: ರಷ್ಯಾದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಹುರಾಷ್ಟ್ರಗಳ ಭಯೋತ್ಪಾದನೆ ನಿಗ್ರಹ ಮಿಲಿಟರಿ ಕವಾಯತಿನಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಭಾಗವಹಿಸಲಿವೆ. ಚೀನಾ ಮತ್ತು ಇತರ ಹಲವಾರು ರಾಷ್ಟ್ರಗಳೂ ಈ ಕವಾಯತಿನಲ್ಲಿ ಪಾಲ್ಗೊಳ್ಳಲಿವೆ.
ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಚೌಕಟ್ಟಿನಡಿ ರಷ್ಯಾದ ಉರಲ್ ಪರ್ವತದಲ್ಲಿ ಈ ಮಿಲಿಟರಿ ಕವಾಯತು ನಡೆಯಲಿದ್ದು,ಎಲ್ಲ ಎಸ್‌ಸಿಒ ಸದಸ್ಯರಾಷ್ಟ್ರಗಳು ಭಾಗವಹಿಸಲಿವೆ. ಚೀನಾ ಪ್ರಾಬಲ್ಯದ ಎಸ್‌ಸಿಒ ಅಮೆರಿಕ ನೇತೃತ್ವದ ನ್ಯಾಟೊಗೆ ಸರಿಸಮನಾಗಿ ಬೆಳೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಕವಾಯತಿನ ಮುಖ್ಯ ಉದ್ದೇಶವಾಗಿರುವ ಶಾಂತಿ ಅಭಿಯಾನವು ಎಂಟು ಎಸ್‌ಸಿಒ ಸದಸ್ಯರಾಷ್ಟ್ರಗಳ ನಡುವೆ ಭಯೋತ್ಪಾದನೆ ನಿಗ್ರಹ ಸಹಕಾರವನ್ನು ಹೆಚ್ಚಿಸಲಿದೆ ಎಂದರು.
ಕಳೆದ ವಾರ ಬೀಜಿಂಗ್‌ನಲ್ಲಿ ನಡೆದಿದ್ದ ಎಸ್‌ಸಿಒ ರಕ್ಷಣಾ ಸಚಿವರ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕವಾಯತಿನಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಖಚಿತ ಪಡಿಸಿದ್ದಾರೆ.
ಸ್ವಾತಂತ್ರಾನಂತರ ಭಾರತ ಮತ್ತು ಪಾಕಿಸ್ತಾನಗಳ ಸೇನೆಗಳು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಿವೆಯಾದರೂ ಮಿಲಿಟರಿ ಕವಾಯತಿನಲ್ಲಿ ಜೊತೆಯಾಗಿ ಪಾಲ್ಗೊಳ್ಳುತ್ತಿರುವುದು ಇದೇ ಪ್ರಥಮ ಬಾರಿಯಾಗಿದೆ.
2001ರಲ್ಲಿ ಶಾಂಘೈ ಶೃಂಗಸಭೆಯಲ್ಲಿ ರಷ್ಯಾ,ಚೀನಾ,ಕಿರ್ಗಿಝ್ ಗಣರಾಜ್ಯ, ಕಝಖಸ್ತಾನ್,ತಝಕಿಸ್ತಾನ ಮತ್ತು ಉಝಬೆಕಿಸ್ಥಾನ ಅಧ್ಯಕ್ಷರು ಎಸ್‌ಸಿಒ ಅನ್ನು ಸ್ಥಾಪಿಸಿದ್ದು,2005ರಲ್ಲಿ ಭಾರತ ಮತ್ತು ಪಾಕಿಸ್ತಾನಗಳನ್ನು ವೀಕ್ಷಕರನ್ನಾಗಿ ಈ ಗುಂಪಿನಲ್ಲಿ ಸೇರಿಸಿಕೊಳ್ಳಲಾಗಿತ್ತು. ಕಳೆದ ವರ್ಷ ಇವೆರಡೂ ರಾಷ್ಟ್ರಗಳು ಪೂರ್ಣಪ್ರಮಾಣದ ಸದಸ್ಯರಾಗಿವೆ.







