ಅಶ್ವತ್ಥಪುರ: ಬೂತ್ ಮಟ್ಟದ ಕಾಂಗ್ರೆಸ್ ಸಭೆ

ಮೂಡುಬಿದಿರೆ, ಎ. 29: ಈ ಬಾರಿಯ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದ್ದು ಬಡವರು, ಮಹಿಳೆಯರು, ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಆರು ಕೋಟಿ ಜನ ಮೂರೂ ಹೊತ್ತು ಊಟ ಮಾಡುವಂತೆ ಮಾಡಿದವರು ಎಂದು ಶಾಸಕ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಅಭಯಚಂದ್ರ ಹೇಳಿದರು.
ರವಿವಾರ ಸಂಜೆ ಅಶ್ವತ್ಥಪುರದಲ್ಲಿರುವ, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅವರ ಮನೆಯಂಗಳದಲ್ಲಿ ನಡೆದ ಬಡಗ ಮಿಜಾರು ಬೂತ್ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು ಅಶ್ವತ್ಥಪುರ ಪ್ರದೇಶದ ರಸ್ತೆಗಳನ್ನು ಸುಮಾರು ರೂ. 25 ಕೋಟಿಗೂ ಮಿಗಿಲು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ; ಇಲ್ಲೊಂದು ಜಿಮ್ ಕೂಡಾ ಬರಲಿದೆ’ ಎಂದರು. ಅರ್ಜಿ ಹಾಕಿದ ಎಲ್ಲರಿಗೂ ಬಿಪಿಎಲ್ ಕಾರ್ಡು ಒದಗಿಸಲಾಗುತ್ತಿದ್ದು ರೇಶನ್ ಪಡೆಯುವಾಗ ಹೆಬ್ಬೆರಳು ಗುರುತು ದಾಖಲಿಸುವ ಸಂದರ್ಭ ಉಂಟಾಗುತ್ತಿರುವ ತಾಂತ್ರಿಕ ತೊಂದರೆಗಳನ್ನು ಕೂಡಲೇ ಸರಿಪಡಿಸಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ವೃದ್ಧೆಯೋರ್ವರು ಈ ಬಗ್ಗೆ ಅಭಯಚಂದ್ರ ಅವರ ಗಮನ ಸೆಳೆದಿದ್ದರು.
ತಾ.ಪಂ. ಸದಸ್ಯ ಪ್ರಕಾಶ್ ಗೌಡ, ಹಿರಿಯ ಕಾಂಗ್ರೆಸಿಗ ಮೋಹನ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರೇಮನಾಥ ಮಾರ್ಲ, ಗ್ರಾ.ಪಂ. ಸದಸ್ಯ ಉಮೇಶ ಶೆಟ್ಟಿ, ರಾಮ ಭಟ್, ವೆಂಕಪ್ಪ ಗೌಡ, ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು.





