ಧರ್ಮಸ್ಥಳ: 47ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂಭ

ಬೆಳ್ತಂಗಡಿ, ಎ. 29: ದಾಂಪತ್ಯವನ್ನು ಪಾವಿತ್ರ್ಯತೆ, ಗೌರವ, ಪರಸ್ಪರ ತಿಳುವಳಿಕೆಯಿಂದ, ನಂಬಿಕೆಯಿಂದ ಮುಂದುವರಿಸಿಕೊಂಡು ಹೋದಲ್ಲಿ ವಿಚ್ಛೇದನದ ಪ್ರಶ್ನೆಯೇ ಬರಲಾರದು ಎಂದು ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ರವಿವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 47 ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂದಲ್ಲಿ ಭಾಗವಹಿಸಿ ಮಾತನಾಡಿದರು.
ಇಲ್ಲಿ ಅಗ್ನಿ ಸಾಕ್ಷಿ, ಗುರು ಸಾಕ್ಷಿಯಾಗಿ ವಿವಾಹವಾಗಿರುವ ನೀವೆಲ್ಲರೂ ಅದೃಷ್ಟವಂತರು. ಸಂತೋಷ, ಸಂಭ್ರಮ, ಪ್ರೀತಿಯಿಂದ ಮಾಡುವ ಸಮಾರಂಭಗಳಲ್ಲಿ ವಿವಾಹವೂ ಒಂದು. ಅದನ್ನುಇಲ್ಲಿ ನೀವೆಲ್ಲರೂ ಅನುಭವಿಸಿದ್ದೀರಿ. ಭಗವಂತನನ್ನೇ ಸಂಸಾರಿಯನ್ನಾಗಿ ಮಾಡಿಅವರು ನಮ್ಮ ವೈವಾಹಿಕ ಜೀವನದ ಪ್ರತೀಕ ಆದರ್ಶಎಂದು ಭಾವಿಸುತ್ತಿರುವ ನಾವು ದಾಂಪತ್ಯಕ್ಕೆ ವಿಶೇಷವಾದ ಗೌರವವನ್ನು ನೀಡಿದ್ದೇವೆ ಎಂದ ಹೆಗ್ಗಡೆಯವರು ಎಲ್ಲರೂ ಹೊಂದಿಕೊಂಡು, ಪ್ರೀತಿಯಿಂದ, ಆದರಿಂದ ಜೀವನ ಸಾಗಿಸುವಂತಾಗಲಿ ಎಂದು ಹಾರೈಸಿದರು. ಇಲ್ಲಿ 23 ಜೋಡಿಗಳು ಅಂತರ್ಜಾತಿಯ ವಿವಾಹವಾಗಿದೆ. ಅವರು ಮುಂದಕ್ಕೆ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ಅವರಿಗೆ ಸರಕಾರದ ನೋಂದಣಿ ಮಾಡಿಕೊಳ್ಳವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಇದಕ್ಕೂ ಮೊದಲು ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆಯವರು ವಧು ವರರಿಗೆ ಮಾಂಗಲ್ಯಗಳನ್ನು ವಿತರಿಸಿದರು.
ಕನ್ನಡ ಚಲನ ಚಿತ್ರನಟ ಕಿಚ್ಚ ಸುದೀಪ್ಅವರು ವಧುವರರನ್ನು ಆಶೀರ್ವದಿಸುತ್ತಾ, ಕನ್ನಡಿಗನಾಗಿ ಹಾಗು ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳನ್ನು ಪಡೆದಿರುವುದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ವ್ಯಕ್ತಿಯೊಬ್ಬ ಜೀವನದಿಂದ ನಿರ್ಗಮಿಸಿದರೂ ಅವನ ನೆನಪನ್ನು ಮಾಡುತ್ತಾರೆಂದಾರೇ ಆತ ಅಜರಾಮರ ಎಂದೆಣಿಸಿಕೊಳ್ಳುತ್ತಾನೆ ಎಂದರು.
ಡಾ ಹೆಗ್ಗಡೆಯವರು ನನ್ನ ಸಿನಿಮಾವೊಂದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಎಲ್ಲಕ್ಕಿಂತ ದೊಡ್ಡ ಪ್ರಶಸ್ತಿಯೆಂದರೆ ನನಗೆ ಅದೇ ಆಗಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹೆಗ್ಗಡೆಯವರು ನನಗೆ ಈ ಸಂಧರ್ಭಕ್ಕೆ ಅವಕಾಶ ಕೊಟ್ಟದ್ದು ನನ್ನಅದೃಷ್ಟವೆಂದೇ ಭಾವಿಸಿದ್ದೇನೆ. ಇಲ್ಲಿ ವಧೂ ವರರು ಪ್ರಮಾಣ ವಚನ ಸ್ವೀಕರಿಸಿದ್ದು ನಾನು ಮೊದಲ ಬಾರಿಗೆ ನೋಡಿದ್ದು. ಇದರಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದರು.
ಬಿರ್ಲಾ ಕಂಪೆನಿಯ ಜಂಟಿ ಅಧ್ಯಕ್ಷ ಮನೋಜ್ ಕುಮಾರ್ ಮೆಹ್ತಾ ಶುಭ ಹಾರೈಸಿದರು. ವೇದಿಕೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಭಾರತೀಯ ಪ್ರತಿನಿಧಿ ಅನೂಷ್ ಮೋಹನ್, ಶಾಸಕ ಕೆ.ವಸಂತ ಬಂಗೇರ, ಪ್ರಿಯಾ ಸುದೀಪ್, ಬಜರಂಗಿ ಬಾಯಿಜಾನ್ ಸಿನೆಮಾದ ನಿರ್ದೇಶಕ ರಾಜೇಶ್ ಭಟ್, ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ಸುಪ್ರಿಯ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಾರ್, ಮಾನ್ಯ ಉಪಸ್ಥಿತರಿದ್ದರು.
ಶುಭಚಂದ್ರ ರಾಜ್ ಸ್ವಾಗತಿಸಿದರು. ಡಾ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಪ್ರಮಾಣ ವಚನ ಬೋಧಿಸಿದರು. ಉಪನ್ಯಾಸಕಿ ಶೃತಿ ಜೈನ್ ಹಾಗೂ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿರು. ವಸಂತ ಭಟ್ ವಂದಿಸಿದರು.
ವೈದಿಕರ ಮಂಗಳ ವೇದಘೋಷ, ವಾದ್ಯಘೋಷಗಳ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 131 ಜೋಡಿ ವಧು-ವರರು ಸಂಜೆ 6-40ರ ಗೋಧೋಳಿ ಮುಹೂರ್ತದಲ್ಲಿ ಧರ್ಮಾಧಿಕಾರಿ ಡಾ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶ್ರೀ ಮಂಜುನಾಥಸ್ವಾಮಿಯ ಅನುಗ್ರಹದೊಂದಿಗೆ ಪ್ರಮಾಣ ವಚನವನ್ನು ಸ್ವೀಕರಿಸಿ, ಸತಿಪತಿಗಳಾದರು. 47ನೇ ವರ್ಷವನ್ನು ಪೂರೈಸಿದ್ದು, ಇದುವರೆಗೆ ಒಟ್ಟು 12160 ಜೋಡಿ ಶ್ರೀ ಮಂಜುನಾಥಸ್ವಾಮಿಯ ಸನ್ನಿಯಲ್ಲಿ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.
ಈ ವರ್ಷ ದಕ. ಜಿಲ್ಲೆಯಿಂದ 10 ಜೋಡಿ, ರಾಜ್ಯದ ನಾನಾ ಜಿಲ್ಲೆಗಳಿಂದ 116 ಜೋಡಿ, ನೆರೆಯ ಕೇರಳ ರಾಜ್ಯದ 5 ಜೋಡಿಗಳು ಸೇರಿದಂತೆ 131 ಜೋಡಿ ಹಸಮಣೆ ಏರಿದರು. ಹಿಂದು ಧರ್ಮದ ಎಲ್ಲ ಜಾತಿಯ ವಧು-ವರರು ಹಸೆಮಣೆಗೇರಿದರೆ, 23 ಜೋಡಿ ಅಂತರ್ಜಾತಿಯ ವಧೂ-ವರರು ಸತಿಪತಿಗಳಾದರು.
12101 ನೇ ಜೋಡಿಯಾಗಿ ರಾಯಚೂರಿನ ಲಿಂಗಸಗೂರಿನ ಗುರುರಾಜ್ ಕನ್ನಾಳ ಹಾಗೂ ಕೊಪ್ಪಳದ ರೂಪಾ ರಂಗಿ ದಂಪತಿಗಳಾಗಿ ಹೊಸಜೀವನ ಪ್ರಾರಂಭಿಸಿದರು. ಗುರುರಾಜ್ ಭಾರತೀಯ ಭೂಸೇನೆಯ ಆರ್ಮಿ ಮೆಡಿಕಲ್ ಕಾರ್ಫ್ ಯೋಧನಾಗಿದ್ದು, ರೂಪಾ ಶಿಕ್ಷಕಿಯಾಗಿದ್ದಾರೆ. ಸುದೀಪ್ ಅವರು ದಂಪತಿಗಳಿಗೆ ಮಾಂಗಲ್ಯವನ್ನು ವಿತರಿಸಿದರು.







