ಬೆಂಗಳೂರು: 6 ವರ್ಷದ ಬಾಲಕಿಯ ಅತ್ಯಾಚಾರ; ಅಪರಾಧಿಗೆ ಮರಣ ದಂಡನೆ ವಿಧಿಸಿದ ಸೆಷನ್ಸ್ ಕೋರ್ಟ್

ಬೆಂಗಳೂರು, ಎ. 29: ಆರು ವರ್ಷದ ಬಾಲಕಿ ಮೇಲೆ ಕ್ರೂರ ರೀತಿಯಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿಗೆ ಮರಣ ದಂಡನೆ ವಿಧಿಸಿ ಬೆಂಗಳೂರಿನ 54 ನೆ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಆನೆಗುಂದಿಯ ಅನಿಲ್ ಬಳಗಾರ್ ಶಿಕ್ಷೆಗೊಳಗಾಗಿರುವ ಅಪರಾಧಿ. ಬೆಂಗಳೂರಿನ ಬನಶಂಕರಿ 3ನೆ ಹಂತದಲ್ಲಿ ವಾಸವಿದ್ದ ಈತ ಕಳೆದ 2017ರ ಎ.20ರ ಸಂಜೆ 6 ಗಂಟೆ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಘಟನೆ ನಡೆದ ದಿನ ಸಂಜೆ ಶಾಲೆ ಮುಗಿಸಿ ಮನೆಗೆ ಬಂದಿದ್ದ ಬಾಲಕಿ ಸಮವಸ್ತ್ರ ಬದಲಿಸಿ ಮನೆ ಹೊರಗೆ ಆಟವಾಡುತ್ತಿದ್ದಳು. ಇದೇ ವೇಳೆ ಬಾಲಕಿಯ ತಾತ ಸಹ ಹೊರಗೆ ಕುಳಿತು ಮೊಮ್ಮಗಳ ಆಟಕ್ಕೆ ಪ್ರೋತ್ಸಾಹ ನೀಡುತ್ತಿದ್ದ. ನಂತರ ಬಾಲಕಿಯ ತಾತ ಮನೆ ಒಳಗೆ ಹೋಗಿ ಹೊರ ಬರುವಷ್ಟರಲ್ಲಿ ಬಾಲಕಿಯನ್ನು ಅಪಹರಿಸಿ ಸಮೀಪದಲ್ಲಿಯೇ ಇದ್ದ ತನ್ನ ಬಾಡಿಗೆ ಮನೆಯೊಳಗೆ ತೆಗೆದುಕೊಂಡು ಹೋಗಿದ್ದ. ನಂತರ ಬಾಲಕಿಯ ಮೇಲೆ ಕ್ರೂರ ರೀತಿಯಲ್ಲಿ ಅತ್ಯಾಚಾರ ಎಸಗಿ, ಕೊನೆಯಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ.
ಆಟವಾಡುತ್ತಿದ್ದ ಬಾಲಕಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರಿಂದ ಆತಂಕಗೊಂಡ ಪೋಷಕರು ತಮ್ಮ ಏರಿಯಾ, ಬಾಲಕಿ ಹೋಗುತ್ತಿದ್ದ ಶಾಲೆ, ಆಟವಾಡುವ ಸ್ಥಳಗಳು, ಪರಿಚಯಸ್ಥರ ಮನೆಗಳಲ್ಲೆಲ್ಲಾ ಹುಡುಕಿದ್ದರು. ಕೊನೆಗೆ ಎಲ್ಲಿಯೂ ಸಿಗದೆ ಕಂಗಾಲಾಗಿದ್ದ ಪೋಷಕರು ಎ.21ರಂದು ಗಿರಿನಗರ ಪೊಲೀಸ್ ಠಾಣೆಗೆ ತೆರಳಿ, ಬಾಲಕಿ ಕಾಣೆಯಾಗಿರುವ ಕುರಿತು ದೂರು ಸಲ್ಲಿಸಿದ್ದರು. ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದರೂ ಬಾಲಕಿ ಪತ್ತೆಯಾಗಿರಲಿಲ್ಲ.
ಬಾಲಕಿ ನಾಪತ್ತೆಯಾದ ಕೆಲ ದಿನಗಳ ನಂತರ ಅನಿಲ್ ಬಳಗಾರ್ ವಾಸವಿದ್ದ ಬಾಡಿಗೆ ಮನೆಯಲ್ಲಿ ದುರ್ವಾಸನೆ ಹೊರಬರುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಪೊಲೀಸರು ಅನಿಲ್ ಮನೆ ಪರಿಶೀಲಿಸಿದಾಗ ರಟ್ಟಿನ ಬಾಕ್ಸ್‌ನ ಒಳಗೆ ಬಾಲಕಿ ಕೊಳೆತ ಶವ ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಕುರುಹುಗಳು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಬಾಲಕಿಯನ್ನು ಅನಿಲ್ ಕರೆತಂದು ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಅನುಮಾನಿಸಿದ್ದರು.
ಆ ಪ್ರಕಾರವೇ ತನಿಖೆ ಮುಂದುವರಿಸಿದ ಪೊಲೀಸರು ಫೋನ್ ಸ್ವೀಚ್ ಆಫ್ ಮಾಡಿ ಕಲಬುರಗಿಯ ಸೇಡಂನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಅನಿಲ್ ಬಳಗಾರ್‌ನನ್ನು ಪೊಲೀಸರು ಬಂಧಿಸಿ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸಂಪೂರ್ಣ ಘಟನೆ ಬೆಳಕಿಗೆ ಬಂದಿತ್ತು. ತದನಂತರ ಪೊಲೀಸರು ಆರೋಪಪಟ್ಟಿ ಸಿದ್ದಪಡಿಸಿ ನಗರದ 54 ನೇ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದರು.
ಅತ್ಯಂತ ಘೋರ ಸ್ವರೂಪದ ಪ್ರಕರಣ ಇದಾಗಿದ್ದರಿಂದ ನ್ಯಾ.ಲತಾಕುಮಾರಿ ಅವರಿದ್ದ ಪೀಠ ಶೀಘ್ರಗತಿಯಲ್ಲಿ ವಿಚಾರಣೆ ನಡೆಸಿತ್ತು. ಹೀಗಾಗಿ ಆರೋಪಿ ಕೃತ್ಯ ನಡೆಸಿ ವರ್ಷ ತುಂಬುವ ಹೊತ್ತಿಗೆ ಆತನ ಅಪರಾಧ ಸಾಬೀತಾಗಿದ್ದು, ಎ.28ರಂದು ಮರಣ ದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಹೊರಡಿಸಿದೆ. ಸರಕಾರಿ ಅಭಿಯೋಜಕರಾಗಿ ಚಿನ್ನವೆಂಕಟರಮಣಪ್ಪ ವಾದ ಮಂಡಿಸಿದ್ದರು.







