ರಾಜಧಾನಿ ಬೆಂಗಳೂರಿಗೆ ಪುಟ್ಟಣ್ಣ ಚೆಟ್ಟಿ ಕೊಡುಗೆ ಸ್ಮರಣೀಯ: ಲಹರಿ ವೇಲು
ಬೆಂಗಳೂರು, ಎ. 29: ರಾಜಧಾನಿ ಬೆಂಗಳೂರಿಗೆ ಸರ್ ಪುಟ್ಟಣ್ಣ ಚೆಟ್ಟಿಯವರು ನೀಡಿರುವ ಕೊಡುಗೆ ಸರ್ವಕಾಲಕ್ಕೂ ಸ್ಮರಣೀಯ ಎಂದು ತುಳಸಿರಾಮ ನಾಯ್ಡು (ಲಹರಿ ವೇಲು) ತಿಳಿಸಿದ್ದಾರೆ.
ರವಿವಾರ ನಗರದ ಪುರಭವನದಲ್ಲಿ ದಿವಾನ್ ಸರ್ ಕೆ.ಪಿ. ಪುಟ್ಟಣ್ಣಚೆಟ್ಟಿ ವೀರಶೈವ ಉಚಿತ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ಹಾಗೂ ದಿವಾನ್ ಸರ್ ಕೆ.ಪಿ. ಪುಟ್ಟಣ್ಣಚೆಟ್ಟಿ ಹಾಸ್ಟೆಲ್ ಸಿನಿಯರ್ ಸ್ಟೂಡೆಂಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಶಕಪುರುಷ ದಿವಾನ್ ಸರ್ ಪುಟ್ಟಣ್ಣಚೆಟ್ಟಿಯವರ 162ನೆ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದಿವಾನ್ ಪುಟ್ಟಣ್ಣ ಚೆಟ್ಟಿಯವರು 19-20ನೆ ಶತಮಾನದ ಶಕಪುರುಷ. ಏಕಕಾಲಕ್ಕೆ ನಾಡು, ನುಡಿ, ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಒತ್ತಿದ್ದಾರೆ. ಇವರು ಬೆಂಗಳೂರಿಗೆ ನೀಡಿರುವ ಕೊಡುಗೆ ಸರ್ವಕಾಲಕ್ಕೂ ಸ್ಮರಣೀಯವಾದದ್ದು ಎಂದು ಸ್ಮರಿಸಿದರು.
ನಾನು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬೆಳೆದವನು. ಸಾಂಸ್ಕೃತಿಕ ವೇದಿಕೆಯಾಗಿ ಮೊದಲು ನೀಡಿದ್ದು ಇದೇ ಪುಟ್ಟಣ್ಣ ಚೆಟ್ಟಿ ಪುರಭವನವ. ನಂತರದ ದಿನಗಳಲ್ಲಿ ಲಂಡನ್‌ನ ಆಲ್ಬಟ್ ಹಾಲ್ ಕೂಡಾ ಕಂಡಿದ್ದೇನೆ. ಆದರೆ, ನನಗೆ ಇಂದಿಗೂ ಪುರಭವನವೇ ಅಚ್ಚು-ಮೆಚ್ಚು ಎಂದು ಅವರು ಹೇಳಿದರು.
ದಿವಾನ್ ಸರ್ ಕೆ.ಪಿ.ಪುಟ್ಟಣ್ಣಚೆಟ್ಟಿ ಮೊಮ್ಮಗ ಹಾಗೂ ವೀರಶೈವ ಉಚಿತ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎಸ್. ವಿಶ್ವನಾಥ್ ಮಾತನಾಡಿ, ನಮ್ಮ ತಾತನವರು ಹೊಸೂರಿನಿಂದ ಬಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಅವರಿಗೆ ವಿಧ್ಯಾರ್ಥಿಗಳ ಕಷ್ಟ, ಹಾಗೂ ಸಾಮಾಜಿಕ ಸಮಸ್ಯೆಗಳು ಅರಿವಿದ್ದವು. ಹೀಗಾಗಿ, ಅವರು ಮೈಸೂರು ಸಂಸ್ಥಾನದ ದಿವಾನರಾದ ನಂತರ ಶಿಕ್ಷಣ, ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಮರೆಯಲಾರದ ಕೊಡುಗೆ ನೀಡಿದ್ದಾರೆ ಎಂದು ನೆನೆದರು.
ಈ ವೇಳೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸೋಲೂರು ಕಂಚಗಲ್ ಬಂಡೆಮಠದ ಬಸವಲಿಂಗಸ್ವಾಮೀಜಿ, ದಿವಾನ್ ಸರ್ ಕೆ.ಪಿ. ಪುಟ್ಟಣ್ಣಚೆಟ್ಟಿ ವೀರಶೈವ ಉಚಿತ ವಿದ್ಯಾರ್ಥಿನಿಲಯದ ಆಡಳಿತ ಮಂಡಳಿ ತ್ರಿಪುರ ವಿಶ್ವನಾಥ್, ಸಮಾಜ ಸೇವಕ ಎಸ್.ರಾಜಶೇಖರ್, ಕಲಾವಿದೆ ಗೀತಾಬೆಣಗಿ ಸೇರಿ ಪ್ರಮುಖರಿದ್ದರು.







