ಮಹಾಕಾವ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಬೇಕು: ಡಾ.ಕೆ.ಆರ್.ದುರ್ಗಾದಾಸ್

ಬೆಂಗಳೂರು, ಎ.29: ಅನಕ್ಷರಸ್ಥ ಸಮುದಾಯಗಳಲ್ಲಿ ಹುದುಗಿರುವ ಮಹಾಕಾವ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಬೇಕಾಗಿದೆ ಎಂದು ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಕೆ.ಆರ್.ದುರ್ಗಾದಾಸ್ ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ, ‘ಜನಪದ ಮಹಾಕಾವ್ಯ, ಮಲೆಮಾದೇಶ್ವರ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣ ಮತ್ತು ಮಹಾಭಾರತಗಳಷ್ಠೇ ಭಾರತದ ಚರಿತ್ರೆಯನ್ನು ಹೇಳುವುದಲ್ಲ. ಅದರ ಜತೆಗೆ ಬುಡಕಟ್ಟು ಸಮುದಾಯಗಳು ಪ್ರಸ್ತುತ ಪಡಿಸಿವೆ. ಬುಡಕಟ್ಟು ಸಂಸ್ಕೃತಿ ಭಾರತದ ಆತ್ಮವಿದ್ದಂತೆ ಎಂದು ಅಭಿಪ್ರಾಯಪಟ್ಟ ಅವರು, ನಮಗೆ ನೂರಾರು ರಾಮಾಯಣದ ಕಥೆಗಳು ಸಿಗುತ್ತವೆ. ಹೀಗಾಗಿ, ಅನಕ್ಷರಸ್ಥ ಸಮುದಾಯಗಳಲ್ಲಿ ಹುದುಗಿರುವ ಮಹಾಕಾವ್ಯವನ್ನು ಪರಿಚಾಯಿಸಬೇಕಾಗಿದೆ ಎಂದರು.
ಜಾನಪದ ಕಲೆಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಪರಿಷ್ಕಾರಗೊಂಡು, ರಾಜ ಮಹಾರಾಜರು, ಮಹಾ ಪುರುಷರು, ಇತಿಹಾಸ ಪ್ರಸಿದ್ಧರು ಸೇರಿದಂತೆ ವಿವಿಧ ಅಂಶಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿವೆ. ಹೊಸತನ ನೀಡುವುದಕ್ಕಾಗಿ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಮರುಹುಟ್ಟನ್ನು ಪಡೆಯುತ್ತವೆ. ಜಾನಪದದ ಕುರಿತು ಸಂಶೋಧನೆ ಮಾಡಿದಾಗ ಮಾತ್ರ ಅನೇಕ ಐತಿಹ್ಯಗಳು ದೊರೆಯಲು ಸಾಧ್ಯ ಎಂದು ನುಡಿದರು.
ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಬಿ.ಗಂಗಾಧರ ಮಾತನಾಡಿ, ಜಾನಪದ ಮಹಾಕಾವ್ಯಗಳು ದಮನಿತ ಸಮುದಾಯಗಳ ಆತ್ಮಾಭಿಮಾನವನ್ನ ಹೆಚ್ಚಿಸುವ ಆತ್ಮಶ್ವಾಸವನ್ನ ವೃದ್ಧಿಸುವ ಸಾಮರ್ಥ್ಯವನ್ನು ಹೊಂದಿವೆ.
ಈ ನೆಲೆಯಲ್ಲಿ ನಡೆಯುವ ಅಧ್ಯಯನಗಳು ನೈರಾಶ್ಯದಿಂದ ಮನುಷ್ಯನನ್ನು ಶ್ವಾಸದ ಪಥಕ್ಕೆ ತಲುಪಿಸುತ್ತವೆ. ಈ ಹಿನ್ನೆಲೆಯಲ್ಲಿ ಕನ್ನಡ ಅಧ್ಯಯನ ಕೇಂದ್ರವು ಮಹಾಕಾವ್ಯಗಳನ್ನು ಕುರಿತ ವಿಚಾರಸಂಕಿರಣ ಮಾಲಿಕೆಯನ್ನು ಆಯೋಜಿಸಿದೆ ಎಂದು ಹೇಳಿದರು.
ವಿಚಾರಣ ಸಂಕಿರಣದಲ್ಲಿ ಬೆಂಗಳೂರು ವಿವಿ ಕುಲಪತಿ ಡಾ.ಐ.ಎಸ್. ಶಿವಕುಮಾರ್, ಕುಲಸಚಿವ ಡಾ.ಬಿ.ಕೆ.ರವಿ, ಡಾ.ಮೊಗಳ್ಳಿ ಗಣೇಶ್, ಡಾ. ಚೆಲುವರಾಜು, ಡಾ.ಬೈರಮಂಗಲ ರಾಮೇಗೌಡ, ಡಾ.ಎಚ್.ದಂಡಪ್ಪ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.







