ಮೇ 1ರಂದು ನರೇಂದ್ರ ಮೋದಿ ಉಡುಪಿಗೆ: ಭರದ ಸಿದ್ಧತೆ

ಉಡುಪಿ, ಎ. 29: ದೇಶದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕಾಗಿ ಮೇ 1ರಂದು ಉಡುಪಿಗೆ ಆಗಮಿಸಲಿದ್ದು, ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮಧ್ಯಾಹ್ನ 2.50ಕ್ಕೆ ಆದಿಉಡುಪಿ ಹೆಲಿಪ್ಯಾಡ್‌ಗೆ ಆಗಮಿಸುವ ಮೋದಿ, ಅಲ್ಲಿಂದ ನೇರ ಝಿರೋ ಟ್ರಾಫಿಕ್ ಮೂಲಕ ಕುಂಜಿಬೆಟ್ಟು ಎಂಜಿಎಂ ಕಾಲೇಜು ಮೈದಾನಕ್ಕೆ ಆಗಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿರು ವರು ಎಂದರು.
ಈ ಸಮಾವೇಶದಲ್ಲಿ ಜಿಲ್ಲೆಯ ಐವರು ಅಭ್ಯರ್ಥಿಗಳು, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಭಟ್ಕಳದ ಅಭ್ಯರ್ಥಿಗಳು ಪಾಲ್ಗೊಳ್ಳಲಿರು ವರು. ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಭಾಗವಹಿಸಲಿರುವರು. ಸಮಾವೇಶದಲ್ಲಿ ಸುಮಾರು ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನಿಂದ ಆಗಮಿಸಿರುವ ತಂಡ ವೇದಿಕೆಯ ಸಿದ್ಧತೆಯನ್ನು ಮಾಡು ತ್ತಿದ್ದು, ಈಗಾಗಲೇ ಶೇ.50ರಷ್ಟು ಕೆಲಸ ಮುಗಿದಿದೆ. ಕಾರ್ಯಕ್ರಮಕ್ಕೆ ಮುನ್ನ ಮಧ್ಯಾಹ್ನ 1ಗಂಟೆಯಿಂದ ಜಗದೀಶ್ ಆಚಾರ್ಯ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಝಿರೋ ಟ್ರಾಫಿಕ್ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮ ಆರಂಭವಾಗುವ ಒಂದು ಗಂಟೆ ಮೊದಲೇ ಮೈದಾನಕ್ಕೆ ಆಗಮಿಸ ಬೇಕು ಎಂದು ಅವರು ಮನವಿ ಮಾಡಿದರು.
ನರೇಂದ್ರ ಮೋದಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಬಗ್ಗೆ ನಾವು ನಿರೀಕ್ಷೆ ಯಲ್ಲಿದ್ದು, ಈವರೆಗೆ ಖಚಿತವಾಗಿಲ್ಲ. ಈಗಾಗಲೇ ಜಿಲ್ಲಾ ಸಮಿತಿಯಿಂದ ಮಠಕ್ಕೆ ಭೇಟಿ ನೀಡುವಂತೆ ವಿನಂತಿ ಮಾಡಿಕೊಳ್ಳಲಾಗಿದೆ. ಸಮಯ ಮತ್ತು ಭದ್ರತೆಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠ ಭೇಟಿ ಇನ್ನು ಕೂಡ ಖಚಿತವಾಗಿಲ್ಲ. ಅದು ಬಿಟ್ಟರೆ ಸಿದ್ಧರಾಮಯ್ಯನವರ ಹಾಗೆ ಉದ್ದೇಶಪೂರ್ವಕವಾಗಿ ಭೇಟಿ ನೀಡದೆ ಹೋಗುತ್ತಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಟಿಯಲ್ಲಿ ಉತ್ತರ ಪ್ರದೇಶದ ರಾಜ್ಯ ಸಚಿವ ಮಹೇಂದ್ರ ಸಿಂಗ್, ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್, ಪ್ರೇಮ್ ಪ್ರಸಾದ್, ರಘುಪತಿ ಭಟ್, ಕೋಟ ಶ್ರೀನಿವಾಸ ಪೂಜಾರಿ, ಉದಯ ಕುಮಾರ್ ಶೆಟ್ಟಿ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.







