ಗೋಳಿಹೊಳೆ ಕೊಲೆ ಪ್ರಕರಣ: ಇಬ್ಬರು ಸಹೋದರರ ಬಂಧನ

ಮುತ್ತಯ್ಯ
ಬೈಂದೂರು, ಎ.29: ಮನೆಯಲ್ಲಿ ಕುಡಿದು ಜಗಳ ಮಾಡುತ್ತಿದ್ದ ಗೋಳಿಹೊಳೆ ಗ್ರಾಮದ ಕಂಬಳಗದ್ದೆಯ ಮುತ್ತಯ್ಯ ಮರಾಠಿ(35) ಎಂಬವರ ಕೊಲೆ ಮಾಡಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಹೋದರನ್ನು ಬೈಂದೂರು ಪೊಲೀಸರು ಇಂದು ಬಂಧಿಸಿದ್ದಾರೆ.
ಗೋಳಿಹೊಳೆ ಗ್ರಾಮದ ಕಂಬಳಗದ್ದೆ ಜಟ್ಟಿಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ದಿ.ನಾರಾಯಣ ಮರಾಠಿ ಎಂಬವರ ಮಕ್ಕಳಾದ ದುರ್ಗಾ ಮರಾಠಿ (32) ಹಾಗೂ ರಾಘವೇಂದ್ರ ಮರಾಠಿ (28) ಬಂಧಿತ ಆರೋಪಿಗಳಾಗಿದ್ದು, ಇನ್ನೋರ್ವ ಸಹೋದರ ಅಣ್ಣಪ್ಪಮರಾಠಿ (40) ಎಂಬವರನ್ನು ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.
ಆರೋಪಿಗಳಿಬ್ಬರು ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ ಸಹೋದರ ಮುತ್ತಯ್ಯ ಮರಾಠಿಯನ್ನು ಎ. 26ರಂದು ಸಂಜೆ ವೇಳೆ ಕೈಕಾಲು ಕಟ್ಟಿ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರು. ಮುತ್ತಯ್ಯ ಮರಾಠಿಯ ಸಾವನ್ನು ಆತ್ಮಹತ್ಯೆ ಎಂಬುದಾಗಿ ಬಿಂಬಿಸಲು ಯತ್ನಿಸಿ, ಅದೇ ದಿನ ರಾತ್ರಿ ಮನೆಯ ಸಮೀಪದ ಹಾಡಿಯಲ್ಲಿ ಮೃತದೇಹವನ್ನು ಸುಟ್ಟು ಹಾಕಿದ್ದರು.
ಈ ವಿಚಾರ ಎ.28ರಂದು ಪೊಲೀಸರಿಗೆ ತಿಳಿದಿದ್ದು, ಅದರಂತೆ ಮೂವರು ಸಹೋದರರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ಆಗ ಇಬ್ಬರು ಸಹೋದರರು ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಅದರಂತೆ ಇಬ್ಬರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖ ಲಾಗಿದೆ. ಇಂದು ಸಂಜೆ ವೇಳೆ ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮೇ 9ರವೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.







