ಹನೂರು: ಪೂರ್ತಿಯಾಗದ ಅಜ್ಜಿಪುರ ಗ್ರಾಮದ ರಸ್ತೆ ಕಾಮಗಾರಿ; ಸ್ಥಳೀಯರ ಆಕ್ರೋಶ

ಹನೂರು,ಎ.29: ಅಜ್ಜಿಪುರ ಗ್ರಾಮದಿಂದ ರಾಮಪುರಕ್ಕೆ ತೆರಳುವ ರಸ್ತೆಯಲ್ಲಿ ಡಾಂಬರೀಕರಣಕ್ಕೆ ಜೆಲ್ಲಿ ಕಲ್ಲುಗಳನ್ನು ಹಾಕಿದ್ದು, ರೋಲರ್ ನಿಂದ ಸಮತಟ್ಟು ಮಾಡದೆ ಇರುವುದರಿಂದ ವಾಹನ ಸವಾರರು ಹರಸಾಹಸ ಪಡುವಂತಾಗಿದೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.
ಹನೂರು ತಾಲೂಕಿನ ಅಜ್ಜಿಪುರ–ರಾಮಾಪುರ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಯು ಪ್ರಾರಂಭಿಸಿದ್ದು, ಸುಮಾರು 2 - 3 ಕಿ.ಮೀ ಹಳೆಯ ರಸ್ತೆ ಕಿತ್ತುಹಾಕಿ ಜೆಲ್ಲಿ ಕಲ್ಲುಗಳನ್ನು ಹಾಕಿದ್ದು, ರೋಲರ್ ನಿಂದ ಸಮತಟ್ಟು ಮಾಡದೆ ಇರುವುದರಿಂದ ವಾಹನ ಸವಾರರು ಹರಸಾಹಸ ಪಟ್ಟು ವಾಹನ ಚಲಾಯಿಸಬೇಕಾಗಿದೆ. ರಸ್ತೆ ಉದ್ದಕ್ಕೂ ಜಲ್ಲಿ ಕಲ್ಲು ಹಾಕಿದ್ದು, ಧೂಳಿನಿಂದ ಕೂಡಿದ ಜಲ್ಲಿಕಲ್ಲು ರಸ್ತೆಯಿಂದಾಗಿ ಈಗಾಗಲೇ ರಾತ್ರಿಯ ಸಮಯದಲ್ಲಿ ಹಲವರು ದ್ವಿಚಕ್ರ ವಾಹನ ಸವಾರರು ಬಿದ್ದಿರುವ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಕಾಮಗಾರಿ ಮುಗಿಸಬೇಕೆಂದು ಆಗ್ರಹಿಸಿದ್ದಾರೆ.
Next Story





