ಡಾ.ಬಿ.ಎಲ್ ಶಂಕರ್ ಚಿಕ್ಕಮಗಳೂರು ಕ್ಷೇತ್ರದ ಆಕ್ಸಿಜನ್: ಶಾಸಕ ಕೆ.ಬಿ ಮಲ್ಲಿಕಾರ್ಜುನ್
ಬಿಜೆಪಿ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ

ಚಿಕ್ಕಮಗಳೂರು, ಎ.29: ಈ ಹಿಂದೆ ನನ್ನ ಅಧಿಕಾರಾವಧಿಯಲ್ಲಿ ಜನರ ಕೋರಿಕೆಯಂತೆ ಎಂಯುಎಸ್‍ಎಸ್‍ಗಳ ಸ್ಥಾಪನೆ, ಕರಗಡ ನೀರಾವರಿ ಯೋಜನೆಗಳ ಚಾಲನೆ, ಅಯ್ಯನಕೆರೆ ದುರಸ್ತಿ ಸೇರಿದಂತೆ ಈ ಭಾಗದ ಕೆಲವು ಶಾಶ್ವತ ಕೆಲಸಗಳನ್ನು ಮಾಡಲು ನನಗೆ ಸಾಧ್ಯವಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಈ ಭಾಗದ ಶಾಸಕರಾಗಿರುವವರು ಯಾವುದೇ ಮುಂದಾಲೋಚನೆ ಇಲ್ಲದೇ ರಾಜಕಾರಣ ಮಾಡಿದ್ದರ ಪರಿಣಾಮ ಜನತೆ ನೀರಿಗಾಗಿ ಪರಿತಪಿಸುವ ಕಾಲ ಬಂದಿದೆ. ಈಗ ಶಂಕರ್ ರವರು ಸ್ಪರ್ಧೆ ಮಾಡಿರುವುದರಿಂದ ಈ ಭಾಗದ ಜನರಿಗೆ ಅವರು ಆಕ್ಸಿಜನ್ ಆಗಿದ್ದಾರೆ. ಅವರು ಶಾಸಕರಾಗಿ ಆಯ್ಕೆಯಾದಲ್ಲಿ ಮುಂದಿನ ದಿನಗಳಲ್ಲಿ ಇಲ್ಲಿನ ಜನತೆ, ರೈತರು ನಿರಾಳವಾಗಿ ಉಸಿರಾಡುವ ವಾತಾವರಣ ನಿರ್ಮಾಣವಾಗುತ್ತದೆ. ಅದಕ್ಕಾಗಿ ಕಾಂಗ್ರೆಸ್ ಮುಖಂಡರು ಮತದಾರರಿಂದ ಶಂಕರ್ ಗೆ ಮತ ಹಾಕಿಸುವ ಕೆಲಸ ಮಾಡಬೇಕೆಂದು ಮಾಜಿ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಕೆಬಿ ಮಲ್ಲಿಕಾರ್ಜುನ್ ಕರೆ ನೀಡಿದ್ದಾರೆ.
ರವಿವಾರ ಬಿಜೆಪಿ ಮುಖಂಡ ಎಸ್.ಕೊಪ್ಪಲು ನಟರಾಜು ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಈ ಭಾಗದ ನಟರಾಜ್ ಸೇರಿದಂತೆ ತಾವೆಲ್ಲರೂ ನನ್ನನ್ನು ಈ ಮನೆಯ ಮಗನಂತೆ ಪ್ರೀತಿ ಮಾಡಿದ್ದೀರಿ. ಹಲವು ಕಾರಣಗಳಿಂದ ನಾವು ನೀವು ರಾಜಕೀಯವಾಗಿ ಭಿನ್ನ ಪಕ್ಷದಲ್ಲಿದ್ದೆವು. ಈಗ ನಾವುಗಳು ನಿಮ್ಮೊಂದಿಗೆ ಇರುವಂತಹ ವಾತಾವರಣವನ್ನು ಡಾ.ಬಿ.ಎಲ್ ಶಂಕರ್ ರವರ ಸ್ಪರ್ಧೆ ಅವಕಾಶ ಮಾಡಿಕೊಟ್ಟಿದೆ ಎಂದರು.
ಪಕ್ಷದ ಅಭ್ಯರ್ಥಿ ಡಾ.ಬಿ.ಎಲ್ ಶಂಕರ್ ಈ ಸಂದರ್ಭದಲ್ಲಿ ಮಾತನಾಡುತ್ತಾ, ನಾಲ್ಕು ದಶಕಗಳ ಮಿತ್ರ ಕೆ.ಬಿ.ಮಲ್ಲಿಕಾರ್ಜುನ್ ರವರೊಂದಿಗೆ ತಮ್ಮೆಲ್ಲರ ಮುಂದೆ ಮತ ಕೇಳಲು ಒದಗಿದ ಅವಕಾಶಕ್ಕಾಗಿ ಧನ್ಯನಾಗಿದ್ದೇನೆ. ಹೊಟ್ಟೆ ತುಂಬಾ ಬದುಕಿನ ಸಂಕಟವನ್ನು ಇಟ್ಟುಕೊಂಡಿರುವ ತಾವುಗಳು ಮತ್ತು ಈ ಭಾಗದ ಮಹಿಳೆಯರು ನಾನು ಮತ ಕೇಳಲು ತಮ್ಮ ಮನೆಗಳಿಗೆ ಬಂದಾಗ ತಾವು ತೋರಿದ ಆತಿತ್ಯ ನನ್ನನ್ನು ಋಣಕ್ಕೆ ಬೀಳಿಸಿದೆ. ಯಾರು ಏನೆಲ್ಲಾ ಮಾಡಿದ್ದಾರೆ, ಏನು ಮಾಡಿಲ್ಲ, ಏಕೆ ಮಾಡಿಲ್ಲ ಎಂಬುದು ತಮಗೆಲ್ಲಾ ತಿಳಿದಿದೆ. ಸಾರ್ವಜನಿಕ ಬದುಕಿನ ನಾಲ್ಕು ದಶಕಗಳಲ್ಲಿ ಕೈಕೊಳಕು ಮಾಡಿಕೊಳ್ಳದೆ, ನನಗೆ ಸಿಕ್ಕ ಅವಕಾಶದಲ್ಲಿ ಒಂದಿಷ್ಟು ದೂರಾಲೋಚನೆಯ ಕೆಲಸ ಮಾಡಿದ್ದೇನೆ. ಈ ಬಾರಿ ನನಗೆ ಅವಕಾಶ ಕೊಡಿ ಈ ಕ್ಷೇತ್ರ ಹಾಗೂ ಈ ಜಿಲ್ಲೆಗೆ ನೀರು ತರುವ, ಪ್ರವಾಸೋದ್ಯಮದ ಭೂಪಟದಲ್ಲಿ ಈ ಜಿಲ್ಲೆ ಗುರುತಾಗುವಂತಹ ಹಲವು ಗುರುತರವಾದ ಕೆಲಸಗಳನ್ನು ಮಾಡೋಣ ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ ಮಾತನಾಡಿ, ನಟರಾಜ್ ಮತ್ತಿತರ ಎಲ್ಲಾ ಹಿರಿಯ ಕಿರಿಯರು ನಮ್ಮ ಪಕ್ಷಕ್ಕೆ ಸೇರಿ ನಮಗೆ ದೊಡ್ಡ ಶಕ್ತಿ ಬರಿಸಿದ್ದೀರಿ. ತಾವೆಲ್ಲರೂ ಕಳೆದ ನಾಲ್ಕಾರು ವರ್ಷಗಳಿಂದ ತಮ್ಮ ಹೋರಾಟದ ಮೂಲಕ ನನಗೆ ಬಲ ಕೊಟ್ಟಿದ್ದರಿಂದ ನಾನು ಸರ್ಕಾರದಿಂದ ಹತ್ತಾರು ಕೋಟಿ ರೂಪಾಯಿಗಳನ್ನು ಕರಗಡ ಯೋಜನೆಗೆ ತರಲು ಸಾಧ್ಯವಾಯಿತು. ಇನ್ನೇನು ಮುಕ್ತಾಯದ ಹಂತದಲ್ಲಿರುವ ಯೋಜನೆಗೆ ಶಂಕರ್ ರವರ ಗೆಲುವು ತಮ್ಮೆಲ್ಲರ ಬಹು ವರ್ಷಗಳ ಕನಸು ನನಸಾಗಲಿದೆ ಎಲ್ಲರೂ ಸಹಕರಿಸಿ ಎಂದು ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ರವರೂ ಕೂಡ ಮಾತನಾಡಿದರು. ಪಕ್ಷದ ಮುಖಂಡ ರವೀಶ್ ಬಸಪ್ಪ ಪ್ರಾಸ್ಥಾವಿಕವಾಗಿ ಮಾತನಾಡಿ ಶಂಕರ್ ರವರ ಸ್ಪರ್ಧೆ ನಮ್ಮೆಲ್ಲರಿಗೂ ಉತ್ಸಾಹ ಬರಿಸಿದೆ. ಆ ಉತ್ಸಾಹ ಬತ್ತದಿರಲು ಅವರ ಗೆಲುವು ಅಗತ್ಯ ಎಂದರು.
ಪಕ್ಷ ಸೇರ್ಪಡೆಗೊಂಡವರ ಪರವಾಗಿ ನಟರಾಜು ಅವರು ಮಾತನಾಡಿ, 1983 ರಲ್ಲಿ ಬಿಜೆಪಿ ಪಕ್ಷಕ್ಕೆ 6 ಮತಗಳು ಬಂದಿದ್ದ ನನ್ನ ಬೂತ್‍ನಲ್ಲಿ ಕ್ರಮೇಣ ಶೇಕಡಾ 75ರಷ್ಟು ಮತಗಳು ಬಿಜೆಪಿಗೆ ಬರುವಂತಹ ಸ್ಥಿತಿ ನಿರ್ಮಾಣವಾಯಿತು. ಇದು ಈ ಭಾಗದ ಎಲ್ಲಾ ಮತಗಟ್ಟೆಗಳಲ್ಲಿ ಆದ ವಿಸ್ಮಯ. ಆದರೆ ಇದರ ಋಣ ತೀರಿಸಲಾಗದ ಬಿಜೆಪಿ ಶಾಸಕರ ಮೇಲೆ ಕಳೆದುಕೊಂಡ ಭರವಸೆ, ಶಂಕರ್ ರವರಂತಹ ರಾಜಕೀಯ ಮೇರು ಪರ್ವತದೊಂದಿಗೆ ಕೆಲಸ ಮಾಡುವ ಬಯಕೆ ಕಾಂಗ್ರೆಸಿಗೆ ಇದೆ ಎಂದರು.
ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ, ಬೀರೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿದ್ದ ನಟರಾಜು ಅವರೊಂದಿಗೆ, ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರುಗಳಾಗಿದ್ದ ಬಿದರೆ ಶಂಕರಲಿಂಗೇಗೌಡ, ಕಳಸಾಪುರ ಗೋಪಾಲಕೃಷ್ಣ, ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಶಂಕರನಹಳ್ಳಿ ರಾಜಣ್ಣ, ಚನ್ನಬಸಪ್ಪ, ಬೋರ್‍ವೆಲ್ ರಘು, ಶಿವಮೂರ್ತಿ ಸೇರಿದಂತೆ 25 ಕ್ಕೂ ಹೆಚ್ಚು ಪ್ರಮುಖರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹಳ್ಳಿ ಹಿತ್ಲು ಮಹೇಶ್, ಕೆಂಗೇಗೌಡ, ಹೇಮಾವತಿ, ಬಸವರಾಜು, ಎಂ.ಎಚ್.ಮೋಹನ್, ಎನ್.ಡಿ.ಚಂದ್ರಪ್ಪ, ಸಂತೋಷ್, ದಕ್ಷಿಣ ಮೂರ್ತಿ ರಾಮಚಂದ್ರಪ್ಪ, ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.







