ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ: ಬಿಹಾರ ಸಚಿವ ಮಂಗಲ ಪಾಂಡೆ

ಸೊರಬ,ಎ.29: ಕರ್ನಾಟಕದ ಜನತೆ ವೇಗದ ಹಾಗೂ ಸಮಗ್ರ ಅಭಿವೃದ್ದಿಗಾಗಿ ಬದಲಾವಣೆಯನ್ನು ಬಯಸಿದ್ದು, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಹಾರದ ಆಹಾರ ಸಚಿವ ಮಂಗಲ ಪಾಂಡೆ ತಿಳಿಸಿದರು.
ಪಟ್ಟಣದ ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ಕರೆದಿದ್ದ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಪಾಲ್ಗೊಂಡು ನಂತರ ಮಾದ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕಳೆದ 10 ದಿನಗಳಿಂದ 25 ವಿಧಾನಸಭಾ ಕ್ಷೇತ್ರಗಳಿಗೆ ಬೇಟಿ ನೀಡಿದ ಅನುಭವದಲ್ಲಿ ಹೇಳುವುದಾರೆ ರಾಜ್ಯದ ಜನತೆ ಬದಲಾವಣೆಯನ್ನು ಬಯಸಿರುವುದನ್ನು ಕಂಡಿದ್ದೇನೆ. ಕಳೆದ 25 ವರ್ಷಗಳ ಬಳಿಕ ಜನತೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವುದು ಕಂಡು ಬರುತ್ತಿದೆ. ರಾಜ್ಯದಲ್ಲಿ ಬಡತನ ಹೆಚ್ಚಿದ್ದು, ನೀರಾವರಿ ಸೌಕರ್ಯವಿಲ್ಲ. ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿವೆ. ಇವೆಲ್ಲವುಗಳಿಂದಾಗಿ ಜನರು ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದ ಅವರು, ಬಡತನ ನಿವಾರಣೆಗೆ ಪ್ರಧಾನ ಮಂತ್ರಿಗಳು ಸಮಗ್ರ ಯೋಜನೆ ತರಲಿದ್ದಾರೆ ಎಂದರು.
ನಾನು ಬಿಜೆಪಿಯ ಕಾರ್ಯಕರ್ತರನ್ನು ಚುನಾವಣೆಗೆ ಸಂಘಟನೆಗೊಳಿಸಲು ಹಾಗೂ ಬೂತ್ ಮಟ್ಟದಿಂದ ಜೋಡಣೆ ಮಾಡಲು ಅಗಮಿಸಿದ್ದು, ಬೂತ್‍ಮಟ್ಟ ಗಟ್ಟಿಯಾದರೆ ಚುನಾವಣೆ ಗೆಲ್ಲುವುದು ಸುಲಭ ಎಂಬ ವಿಶ್ವಾಸ ನಮಗಿದೆ. ಎ.30 ರಂದು ಎಲ್ಲ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ ಕರೆಯುವಂತೆ ಸೂಚಿಸಿದ ಅವರು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ತಾಲೂಕು ಅಧ್ಯಕ್ಷ ಎ.ಎಲ್. ಅರವಿಂದ್, ಪಾಣಿರಾಜಪ್ಪ, ಗಜಾನನರಾವ್, ಗುರುಪ್ರಸನ್ನಗೌಡ, ದೇವೇಂದ್ರಪ್ಪ, ಈಶ್ವರ ಚನ್ನಪಟ್ಟಣ, ದೇವಕಿ ಪಾಣಿ ಮತ್ತಿತರರಿದ್ದರು.







