ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವಿರುದ್ಧ ಹಿರಿಯ ಕಲಾವಿದರು ಧ್ವನಿ ಎತ್ತಬೇಕು: ನಟ ಚೇತನ್

ದಾವಣಗೆರೆ,ಎ.29: ಚಲನಚಿತ್ರ ರಂಗದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹಿರಿಯ ಕಲಾವಿದರು ಧ್ವನಿ ಎತ್ತಬೇಕೆಂದು ಚಿತ್ರ ನಟ ಚೇತನ್ ತಿಳಿಸಿದರು.
ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾನ ಮನಸ್ಕರು ಸೇರಿ ಫಯರ್ ಸಂಸ್ಥೆ ಆರಂಭಿಸಿದ್ದು, ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರಕುಳದ ವಿರುದ್ಧ ಹಾಗೂ ಬಡ ಕಾರ್ಮಿಕರಿಗೆ ಸರ್ಕಾರದಿಂದ ವಿವಿಧ ಸೌಲಭ್ಯ ಕಲ್ಪಿಸಲಿಕ್ಕಾಗಿ ಹೋರಾಡುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಮಹಿಳಾ ಸಮಾನತೆಯ ವಿಚಾರದಲ್ಲಿ ನಾವು ಸಾಕಷ್ಟು ಹಿಂದೆ ಬಿದ್ದಿದ್ದೇವೆ. ದೇಶದಲ್ಲಿ ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಆಗದಿರುವ ಪರಿಣಾಮ, ಪ್ರತಿ 20 ನಿಮಿಷಕ್ಕೆ ಒಂದು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಅತ್ಯಾಚಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದರು.
ದೇವದಾಸಿ ಪದ್ಧತಿ ಒಂದು ಅನಿಷ್ಠ ಪದ್ಧತಿ. ನಿರ್ಮೂಲನೆ ಆಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ಸರ್ಕಾರ ದೇವದಾಸಿ ಪದ್ಧತಿಯನ್ನು ನಿಷೇಧಿಸಿದ್ದರೂ ಇನ್ನೂ ಜೀವಂತವಾಗಿದೆ. ಇವರ ಮಕ್ಕಳು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರಿಗೂ ಮಾನವೀಯ ಘನತೆ ತಂದು ಕೊಡಲು ನಮ್ಮ ಫಯರ್ ಸಂಸ್ಥೆ ಸರ್ಕಾರದ ಜೊತೆಗೆ ಚರ್ಚಿಸಿ ಶಿಕ್ಷಣ, ಉದ್ಯೋಗ ಕೊಡಿಸುವ ಮೂಲಕ ಈ ಅನಿಷ್ಠ ಪದ್ಧತಿಯ ನಿರ್ಮೂಲನೆಗೆ ಶ್ರಮಿಸುತ್ತಿದೆ ಎಂದರು. ಈ ನಾಡಿನ ಸಂಪತ್ತು ಜನರ ಆಸ್ತಿಯಾಗಿದೆ. ಇದು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಆದರೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರೇ ಈ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಈ ಪಕ್ಷಗಳ ಪೈಕಿ ಯಾರೇ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ಹೆಚ್ಚಾಗಲಿದೆ ಎಂದು ಆರೋಪಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಬರೀ ಲಿಂಗಾಯತರು ಮತ್ತು ವೀರಶೈವರ ಮಧ್ಯೆಯ ಹೋರಾಟವಲ್ಲ. ಇದು ವೈಚಾರಿಕ ಸಮಾನತೆ ಮತ್ತು ವೈದಿಕ ಚಿಂತನೆಯ ನಡುವಿನ ಸಂಘರ್ಷವಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗಾಗಿ ನಾಡಿನ ವಿವಿಧ ಭಾಗಗಳಲ್ಲಿ ನಡೆದ ಹೋರಾಟದ ಭಾಗವಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಸಚಿವರು ವರದಿ ಬಂದಿದೆ ಎನ್ನುತ್ತಾರೆ. ಆದರೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸರ್ಕಾರಕ್ಕೆ ವರದಿ ಬಂದಿಲ್ಲ ಎನ್ನುವುದರ ಜೊತೆಗೆ ಇದಕ್ಕೆ ಯಾವುದೇ ಮಾನ್ಯತೆಯೂ ನೀಡುವುದಿಲ್ಲ ಎನ್ನುತ್ತಾರೆ. ಹೀಗೆ ಹೇಳುವ ಶಾ ಜೈನ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದನ್ನು ಏಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದರು.
ನಾನು ಮೊದಲು ಎಂಡೋಸಲ್ಫಾನ್ ಪೀಡಿತರ ಪರವಾಗಿ ಹೋರಾಟ ಆರಂಭಿಸಿದೆ. ನಂತರ ದಿಡ್ಡಳ್ಳಿ ನಿರಾಶ್ರಿತರ ಪರವಾಗಿ ಹೋರಾಟ ಮಾಡಿ ಯಶಸ್ವಿಯೂ ಆಗಿದ್ದೇವೆ. ಆದರೆ, ದಿಡ್ಡಳ್ಳಿ ಹೋರಾಟದಲ್ಲಿ ಪಾಲ್ಗೊಂಡವರನ್ನು ನಕ್ಸಲ್ ಪಟ್ಟಿ ಕಟ್ಟಿರುವ ಬಿಜೆಪಿ ರಾಜ್ಯಾಧ್ಯ ಯಡಿಯೂರಪ್ಪ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತಿತರರಿಗೆ ಈಗಾಗಲೇ ನೋಟೀಸ್ ಕಳುಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲ ಎನ್.ಅನಂತ್ ನಾಯ್ಕ, ವರದಿಗಾರರ ಕೂಟದ ಖಜಾಂಚಿ ತಾರಾನಾಥ್, ಹಿರಿಯ ಪತ್ರಕರ್ತರುಗಳಾದ ಸುಭಾಷ್ ಬಣಗಾರ್, ಬಕ್ಕೇಶ್ ನಾಗನೂರು ಮತ್ತಿತರರು ಹಾಜರಿದ್ದರು.







