Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆ ಲೂಟಿಕೋರ ಗ್ಯಾಂಗ್ ಮತ್ತೆ ಬರುತ್ತಿದೆ;...

ಆ ಲೂಟಿಕೋರ ಗ್ಯಾಂಗ್ ಮತ್ತೆ ಬರುತ್ತಿದೆ; ಹುಷಾರ್

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ30 April 2018 12:01 AM IST
share
ಆ ಲೂಟಿಕೋರ ಗ್ಯಾಂಗ್ ಮತ್ತೆ ಬರುತ್ತಿದೆ; ಹುಷಾರ್

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ 13 ದಿನ ಬಾಕಿಯುಳಿದಿದೆ. ಹೇಗಾದರೂ ಮಾಡಿ, ಮತ್ತೆ ಕರ್ನಾಟಕವನ್ನು ಕಬಳಿಸಬೇಕು ಎಂದು ಬಿಜೆಪಿ ಮಾತ್ರವಲ್ಲ, ನೇರವಾಗಿ ಸಂಘ ಪರಿವಾರ ಕಣಕ್ಕಿಳಿದಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿರೋಧಿಸುತ್ತಿರುವ, ಪಲ್ಲಕ್ಕಿ ಮೇಲೆ ಕುಳಿತುಕೊಳ್ಳುವ ಪಂಚಪೀಠಗಳ ಜಗದ್ಗುರುಗಳು ಈಗ ತಮ್ಮ ಪೀಠಗಳಿಂದ ಕೆಳಗಿಳಿದು ಬಂದು ಉರಿ ಬಿಸಿಲಲ್ಲಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಸುತ್ತುತ್ತಿದ್ದಾರೆ. ಮತದಾರರ ಬಳಿ ಹೋಗಿ ರುದ್ರಾಕ್ಷಿ ಮುಟ್ಟಿಸಿ, ಬಿಜೆಪಿಗೆ ಮತ ಹಾಕಬೇಕೆಂದು ಆಣೆ-ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಅಪಾಯಕಾರಿ ಸಂಗತಿಯೆಂದರೆ, 2008 ರಿಂದ 2013ರವರೆಗೆ ಬಿಜೆಪಿ ಅಧಿಕಾರದಲ್ಲಿದ್ದಾಗ, ಕರ್ನಾಟಕದ ಖನಿಜ ಸಂಪತ್ತು ಲೂಟಿ ಮಾಡಿ, ರಾಜ್ಯದಲ್ಲಿ ರಾಯಲ ಸೀಮಾ ಮಾದರಿಯ ಕ್ರಿಮಿನಲ್ ರಾಜಕಾರಣ ಆರಂಭಿಸಲು ಹೊರಟಿದ್ದ ಗಣಿರೆಡ್ಡಿಯ ದಂಡುಪಾಳ್ಯದ ಗ್ಯಾಂಗು ಮತ್ತೆ ಬಂದಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿದು ವಾಸ್ತವ್ಯ ಮಾಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಕರ್ನಾಟಕವನ್ನು ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕೇಂದ್ರದಲ್ಲಿ ಇರುವ ಅಧಿಕಾರವನ್ನು ಬಳಸಿಕೊಂಡು ತನ್ನನ್ನು ಸುತ್ತುವರಿದಿದ್ದ ಕಾನೂನಿನ ಬೇಡಿಗಳನ್ನು ಕಳಚಿಕೊಂಡ ಈ ಗುಜರಾತಿ ವ್ಯಾಪಾರಿಗೆ ಕರ್ನಾಟಕದ ಚುನಾವಣೆ ಅಳಿವು ಉಳಿವಿನ ಹೋರಾಟವಾಗಿದೆ. ಕರ್ನಾಟಕದ ರಾಜಕೀಯ ಅಧಿಕಾರವನ್ನು ಸ್ವಾಧೀನ ಪಡಿಸಿಕೊಂಡರೆ, ಕ್ರಮೇಣ ಇಡೀ ದಕ್ಷಿಣ ಭಾರತ ಗೆಲ್ಲಬಹುದು. ಶಾಸಕಾಂಗವನ್ನು ವಶಪಡಿಸಿಕೊಳ್ಳುವುದರ ಜೊತೆಗೆ ನ್ಯಾಯಾಂಗವನ್ನು ನಿಯಂತ್ರಿಸಿಕೊಳ್ಳಬಹುದು ಎಂದುಕೊಂಡಿರುವ ಮೋದಿ, ಶಾ ಜೋಡಿಗೆ ದೇಶದಲ್ಲಿ ಒಂದೇ ಒಂದು ಬಿಜೆಪಿಯೇತರ ರಾಜ್ಯ ಇರಬಾರದು ಎಂಬ ಸರ್ವಾಧಿಕಾರಿ ಹಠ ಮೂಡಿದೆ. ಕಾಂಗ್ರೆಸ್ ಮುಕ್ತ ಮಾತ್ರವಲ್ಲ ಕಮ್ಯುನಿಸ್ಟ್ ಸೇರಿದಂತೆ ಪ್ರತಿಪಕ್ಷ ಮುಕ್ತ ಭಾರತ ಇವರ ಗುರಿಯಾಗಿದೆ. ಅದಕ್ಕಾಗಿ ಏನು ಮಾಡಲೂ ಅವರು ಸಿದ್ಧರಾಗಿದ್ದಾರೆ.

ಕರ್ನಾಟಕದ ಚುನಾವಣೆಯನ್ನು ಗೆಲ್ಲಲು ದಲಿತ ಮತದಾರರನ್ನು ಗರಿಷ್ಠ ಪ್ರಮಾಣದಲ್ಲಿ ಒಲಿಸಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ತಾಕೀತು ಮಾಡಿರುವ ಅಮಿತ್ ಶಾ, ಬಲಗೈ ಮತ್ತು ಎಡಗೈ ನಡುವಿನ ಬಿರುಕಿನಲ್ಲಿ ಹಿಂದುತ್ವದ ವೋಟ್‌ಬ್ಯಾಂಕ್ ಭದ್ರಪಡಿಸಿಕೊಳ್ಳಲು ಹೊರಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಮತಗಳು ಹಾಗೂ ಹಳೆಯ ಮೈಸೂರಿನಲ್ಲಿ ಒಕ್ಕಲಿಗರ ಮತಗಳು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ಹೋಗಬಾರದೆಂದು ಅಮಿತ್ ಶಾ ಸಂಬಂಧಿಸಿದ ಸಮುದಾಯ ಮುಖಂಡರಿಗೆ ಜವಾಬ್ದಾರಿ ಹೊರಿಸಿದ್ದಾರೆ.

ಕರ್ನಾಟಕವನ್ನು ಗೆದ್ದರೆ, ಸಂವಿಧಾನ ನಾಶಪಡಿಸಲು ಅನುಕೂಲ ಆಗುವುದೆಂದು ಹೊಂಚು ಹಾಕಿರುವ ಆರೆಸ್ಸೆಸ್ ತನ್ನ 50 ಸಾವಿರ ಸ್ವಯಂ-ಸೇವಕರನ್ನು ರಾಜ್ಯದ ಹಳ್ಳಿಹಳ್ಳಿಗೆ ಕಳುಹಿಸಿದೆ. ಪ್ರತೀ ಮತಗಟ್ಟೆಯ ಪ್ರತಿಯೊಂದು ಮನೆಯ ಪ್ರತಿಯೊಬ್ಬ ಮತದಾರರನ್ನು ಸಂಪರ್ಕಿಸಿ ಮನವೊಲಿಸಲು ಅದು ಸಂಟಿತ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಪೂರಕವಾಗಿ ಅದರ ಸುಳ್ಳಿನ ಫ್ಯಾಕ್ಟರಿಯೂ ಕೂಡ ಹಗಲಿರುಳು ತನ್ನ ಸುಳ್ಳೋತ್ಪಾದನೆಯನ್ನು ಮುಂದುವರಿಸಿದೆ. ರಾಜ್ಯದ ಮೂಲೆಮೂಲೆಗಳಲ್ಲಿ ಕೋಮು ಕಲಹದ ಕಿಡಿ ಹೊತ್ತಿಸುವ ಭಾಷಣಗಳು ನಡೆಯುತ್ತಿವೆ.

ಸಾಮಾಜಿಕ ನ್ಯಾಯದ ರಾಜಕಾರಣ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಯ ಆಂದೋಲನದ ಪರಿಣಾಮವನ್ನು ಹಿಮ್ಮೆಟ್ಟಿಸಿ, ರಾಜ್ಯದ ಜನರಲ್ಲಿ ಅದರಲ್ಲೂ ಬಹುಸಂಖ್ಯಾತ ಹಿಂದೂಗಳಲ್ಲಿ ಹಿಂದುತ್ವದ ಜನಾಂಗ ದ್ವೇಷದ ಮತ್ತು ಏರಿಸಲು ಸಂಘ ಪರಿವಾರದ ಕಾರ್ಯಕರ್ತರು ಕಾರ್ಯೋನ್ಮುಖರಾಗಿದ್ದಾರೆ. ಹಿಂದೂ ರಾಷ್ಟ್ರೀಯತೆಗೆ ಗಂಡಾಂತರ ಬಂದಿದೆ. ಮೋದಿ ಮುಖವನ್ನು ನೋಡಿ, ಬಿಜೆಪಿಗೆ ಮತ ಹಾಕಿ ಎಂದು ಅವರು ಪ್ರಚಾರ ಮಾಡುತ್ತಿದ್ದಾರೆ.

ಕರಾವಳಿ ಕರ್ನಾಟಕ ಮಾತ್ರವಲ್ಲ ಉತ್ತರ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಕೇಂದ್ರೀಕರಿಸಿರುವ ಸಂಘ ಪರಿವಾರ ಆಯ್ದ 120 ಕ್ಷೇತ್ರಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದೆ. ಲಿಂಗಾಯತ ವೀರಶೈವ ವಿವಾದದಿಂದ ಕೈ ಬಿಟ್ಟು ಹೋಗಿದೆ ಎಂದು ಶಂಕಿಸಲಾಗಿದ್ದ ತನ್ನ ವೋಟ್ ಬ್ಯಾಂಕ್‌ನ್ನು ಮತ್ತೆ ಗೆಲ್ಲಲು ಹರಸಾಹಸ ಮಾಡುತ್ತಿದೆ. ಯಡಿಯೂರಪ್ಪನವರಿಗೆ ಒಳಗೊಳಗೆ ಕಿರಿಕಿರಿ ಕೊಡುತ್ತಲೇ, ಅವರ ಮೂಲಕ ಲಿಂಗಾಯತ ಮತಗಳನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕದ ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕಿದೆ. 2008ರಿಂದ 2013ರವರೆಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಏನು ನಡೆಯಿತು ಎಂಬುದನ್ನು ನೆನಪು ಮಾಡಿಕೊಳ್ಳಬೇಕಿದೆ. ಸ್ವಾತಂತ್ರಾ ನಂತರದ ಕರ್ನಾಟಕದಲ್ಲಿ ಆ ಐದು ವರ್ಷಗಳು ಅತ್ಯಂತ ಕೆಟ್ಟ ಕಾಲ. ಬಳ್ಳಾರಿಯ ಗಣಿ ಲೂಟಿ, ರೆಡ್ಡಿಗಳ ಸಾಮ್ರಾಜ್ಯ, ರಿಯಲ್ ಎಸ್ಟೇಟ್ ಮಾಫಿಯಾ, ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿ, ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳ ಬದಲಾವಣೆ, ಸದನದಲ್ಲಿ ನೀಲಿ ಚಿತ್ರದ ವೀಕ್ಷಣೆ, ಮೂವರು ಮಂತ್ರಿಗಳ ರಾಜೀನಾಮೆ ಎಲ್ಲವನ್ನೂ ಜನ ನೆನಪು ಮಾಡಿಕೊಳ್ಳಬೇಕಿದೆ.

ತಾವು ಅಧಿಕಾರದಲ್ಲಿದ್ದಾಗ, ಮಾಡಿದ ಹಗರಣಗಳ ಬಗ್ಗೆ ಬಿಜೆಪಿ ನಾಯಕರಲ್ಲಿ ಯಾವುದೇ ಪಶ್ಚಾತ್ತಾಪ ಕಾಣುತ್ತಿಲ್ಲ. ಜನರ ಬಳಿ ಹೋಗಿ, ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ. ಮತ್ತೆ ಅಧಿಕಾರ ದೊರೆತರೆ, ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ವಿನಯಪೂರ್ವಕವಾಗಿ ಹೇಳುವ ಸೌಜನ್ಯ ಕೂಡ ಬಿಜೆಪಿ ನಾಯಕರಲ್ಲಿ ಇಲ್ಲ. ಇಂದಿಗೂ ಅವರ ದುರಹಂಕಾರದ ಭಾಷೆ ಬದಲಾಗಿಲ್ಲ.

ತಾವು ಅಧಿಕಾರದಲ್ಲಿದ್ದಾಗ ಮಾಡಿದ ಲಂಚಕೋರತನ, ಗಣಿ ಲೂಟಿ ಇವೆಲ್ಲವುಗಳಿಂದ ಜನರು ತಮ್ಮನ್ನು ತಿರಸ್ಕರಿಸಿದರೆಂದು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಿಲ್ಲ. ಅದಕ್ಕೆ ಬದಲಾಗಿ ಕೆಜೆಪಿ-ಬಿಜೆಪಿ ವಿಭಜನೆಯಿಂದ ಅಧಿಕಾರ ಕಳೆದುಕೊಂಡೆವು. ಈಗ ಮತ್ತೆ ಒಂದಾಗಿದ್ದೇವೆ. ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಸೊಕ್ಕಿನ ಮಾತುಗಳು ಅವರ ಬಾಯಿಯಿಂದ ನಿತ್ಯವೂ ಬರುತ್ತಿದೆ.

ಹೇಗಾದರೂ ಮಾಡಿ, ಕರ್ನಾಟಕವನ್ನು ಗೆಲ್ಲಲು ಹೊರಟ ಬಿಜೆಪಿ ಮತ್ತೆ ಗಣಿ ರೆಡ್ಡಿಗಳಿಗೆ ಶರಣಾಗಿದೆ. ಮೊಳಕಾಲ್ಮೂರಿನಲ್ಲಿ ರಾಮುಲು ನಾಮಪತ್ರ ಸಲ್ಲಿಸುವಾಗ ಪ್ರತ್ಯಕ್ಷರಾದ ಜನಾರ್ದನರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅತ್ಯಂತ ಕೆಟ್ಟ ಭಾಷೆಯಲ್ಲಿ ಟೀಕಿಸಿದ್ದಾರೆ. ಬಾದಾಮಿಗೆ ಹೋಗಿ, ಅಲ್ಲಿ ಭಾಷಣ ಮಾಡುತ್ತ, ಸಿದ್ದರಾಮಯ್ಯರನ್ನು ‘ಸಿದ್ದರಾವಣ’ ಎಂದು ಕರೆದು ಅವರನ್ನು ಸಂಹರಿಸಲು ರಾಮುಲು ಅವತರಿಸಿ ಬಂದಿದ್ದಾರೆ ಎಂದು ಭಾಷಣ ಮಾಡಿದರು.

ಸಂಹಾರ ರಾಜಕಾರಣ ರೆಡ್ಡಿಗಳಿಗೆ ಹೊಸದಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಇವರ ಸಂಹಾರ ರಾಜಕಾರಣಕ್ಕೆ ಅನೇಕ ಜನ ಬಲಿಯಾಗಿದ್ದಾರೆ, 20 ವರ್ಷಗಳ ಹಿಂದೆ ಪೊಲೀಸ್ ಪೇದೆಯ ಮಗನಾಗಿದ್ದ ಜನಾರ್ದನ ರೆಡ್ಡಿ ಈಗ ಲಕ್ಷಾಂತರ ಕೋಟಿ ರೂಪಾಯಿ ಒಡೆಯನೆಂದರೆ ಅದೇನು ಸಾಮಾನ್ಯ ಸಂಗತಿಯಲ್ಲ. ಕರ್ನಾಟಕದ ಮಣ್ಣನ್ನು ಮಾರಾಟ ಮಾಡಿ, ಸಂಪತ್ತಿನ ಉಪ್ಪರಿಗೆ ಏರಿ ಅವರು ಕುಳಿತರು.

ಕರ್ನಾಟಕದ ಜನ 2008-13ರವರೆಗಿನ ಬಿಜೆಪಿ ಆಡಳಿತವನ್ನು ಮರೆತಿಲ್ಲ. ಆಗ ಬಳ್ಳಾರಿಯನ್ನು ಬಳ್ಳಾರಿ ರಿಪಬ್ಲಿಕ್ ಎಂದು ಕರೆಯುತ್ತಿದ್ದರು. ಅಲ್ಲಿ ಕಾನೂನಿನ ಆಡಳಿತ ಇರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಗ ಬಳ್ಳಾರಿಗೆ ಹೋಗಲು ಹೆದರುತ್ತಿದ್ದರು. ಅಲ್ಲಿನ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ರೆಡ್ಡಿಗಳ ಎದುರು ಕೈಕಟ್ಟಿ ನಿಲ್ಲುತ್ತಿದ್ದರು. ಇದು ಎಷ್ಟರ ಮಟ್ಟಿಗೆ ಕುಖ್ಯಾತಿ ಗಳಿಸಿತ್ತು ಎಂದರೆ ಇದರ ಬಗ್ಗೆ ಕನ್ನಡದಲ್ಲಿ ‘ಪೃಥ್ವಿ’ ಎಂಬ ಸಿನೆಮಾ ತೆರೆಗೆ ಬಂತು. ಪುನೀತ್ ರಾಜ್‌ಕುಮಾರ್ ಅದರಲ್ಲಿ ಹೀರೋ ಆಗಿದ್ದರು.

ಆ ದಿನಗಳಲ್ಲಿ ಹೊಸಪೇಟೆಯಿಂದ ಪ್ರತಿ ನಿತ್ಯ ನಡುರಾತ್ರಿ 2,000 ಲಾರಿಗಳು ಕಬ್ಬಿಣದ ಅದಿರನ್ನು ಹೇರಿಕೊಂಡು ಕಾರವಾರ ಬಂದರಿಗೆ ಹೋಗುತ್ತಿದ್ದವು. ಇಡೀ ರಾತ್ರಿ ಈ ಲಾರಿಗಳ ಸದ್ದಿಗೆ ಜನ ಬೆಚ್ಚಿ ಬೀಳುತ್ತಿದ್ದರು. ಲಾರಿಗಳ ಗಾಲಿಗೆ ಸಿಲುಕಿ ಕೆಲವರು ಅಸುನೀಗಿದರು. ಹೊಸಪೇಟೆಯಿಂದ ಅಂಕೋಲಾವರೆಗಿನ ರಸ್ತೆ ಸರ್ವನಾಶವಾಗಿ ಹೋಗಿತ್ತು. ಈ ಹಣದಿಂದಲೇ ಆಪರೇಷನ್ ಕಮಲ ಮಾಡಿ ಸರಕಾರ ರಚಿಸಿದ ಯಡಿಯೂರಪ್ಪರಿಗೆ ಇದನ್ನು ತಡೆಯಲು ಸಾಧ್ಯವಿರಲಿಲ್ಲ. ಬಳ್ಳಾರಿಯ ಒಂದು ಮನೆ ಖರೀದಿ ಆಗಬೇಕಿದ್ದರೂ, ಬಳ್ಳಾರಿಗೆ ಹೊಸ ಕಾರು ಬರಬೇಕಿದ್ದರೂ ಅದು ರೆಡ್ಡಿಗಳ ಗಮನಕ್ಕೆ ಬರಲೇಬೇಕಾಗಿತ್ತು.

ಇದನ್ನೆಲ್ಲ ಕಣ್ಣಾರೆ ಕಂಡು ಎಲ್ಲಾ ಪಕ್ಷಗಳು ಸುಮ್ಮನಿದ್ದಾಗ, ಧಾರವಾಡದ ಎಸ್.ಎಸ್.ಹಿರೇಮಠರು ಲೋಕಾಯುಕ್ತರ ಬಳಿಗೆ ಹೋಗಿ, ದೂರು ನೀಡಿದರು. ಆಗ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆಯವರು ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ವರದಿ ನೀಡಿದರು. ಇದರ ಪರಿಣಾಮವಾಗಿ ರೆಡ್ಡಿಗಳ ಸಾಮ್ರಾಜ್ಯ ಕುಸಿದು ಬಿದ್ದು ಜನಾರ್ದನ ರೆಡ್ಡಿ ಹೈದರಾಬಾದಿನ ಚಂಚಲಗುಡ ಜೈಲನ್ನು ಸೇರಬೇಕಾಯಿತು. ಅದೇ ಕಾಲದಲ್ಲಿ ತಾವೇನೂ ಕಡಿಮೆ ಎಂಬಂತೆ ಬೆಂಗಳೂರಿನ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸೊರಬದ ಹಾಲಪ್ಪ ಮುಂತಾದವರು ಕೂಡ ಸೆರೆಮನೆ ಪ್ರವಾಸ ಮಾಡಿ ಬಂದರು.

ಬಿಜೆಪಿಗೆ ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡುವ ಮನಸ್ಸಿದ್ದರೆ, ಈ ರೆಡ್ಡಿ, ಕಟ್ಟಾ, ಹಾಲಪ್ಪ ಹಾಗೂ ನೀಲಿ ಚಿತ್ರ ನೋಡಿದ ಮಾಜಿ ಮಂತ್ರಿಗಳನ್ನು ದೂರವಿಟ್ಟು ಹೊಸ ಮುಖಗಳೊಂದಿಗೆ ಮತದಾರರ ಬಳಿ ಹೋಗಬೇಕಾಗಿತ್ತು. ಆದರೆ, ಅಂತಹ ಯಾವುದೇ ಪಶ್ಚಾತ್ತಾಪದ ಭಾವನೆಯು ಬಿಜೆಪಿಯಲ್ಲಿಲ್ಲ. ಅಂತಲೇ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮೈಸೂರಿನ ರಾಮದಾಸ್, ಸೊರಬದ ಹಾಲಪ್ಪ, ಅಥಣಿಯ ಸಿದ್ದು ಸವದಿ ಮತ್ತೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಣಿ ರೆಡ್ಡಿಗಳು, ಕಟ್ಟಾಗಳು ಮಾತ್ರವಲ್ಲ ಪದ್ಮಪ್ರಿಯಾ ಸಾವಿನ ಪ್ರಕರಣದಲ್ಲಿ ಸೆರೆಮನೆ ಕಂಬಿ ಎಣಿಸಬೇಕಾಗಿದ್ದ ಆದರೆ ದಿಲ್ಲಿಯಲ್ಲಿ ಬೇರು ಬಿಟ್ಟ ಉಡುಪಿ ಮೂಲದ ಕಾಂಗ್ರೆಸ್ ನಾಯಕರ ಕೃಪಾಕಟಾಕ್ಷದಿಂದ ಪಾರಾಗಿ ಬಂದ ರಘುಪತಿ ಭಟ್ಟರು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಥವರನ್ನು ಕಟ್ಟಿಕೊಂಡು ಬಿಜೆಪಿ, ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳುತ್ತಿದೆ.

ಈ ಮಹಾತ್ಮರನ್ನು ವಿಧಾನಸಭೆಗೆ ಗೆಲ್ಲಿಸಲು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಮೇ 3ರಿಂದ ಕರ್ನಾಟಕದಲ್ಲಿ ಸಂಚರಿಸಲಿದ್ದಾರೆ. 36 ಸಭೆಗಳನ್ನು ಉದ್ದೇಶಿಸಿ, ಅವರು ಭಾಷಣ ಮಾಡಲಿದ್ದಾರೆ. ಇವರೊಂದಿಗೆ ಬೆಂಕಿ ಉಗುಳುವ ಭಾಷಣಕಾರರ ತಂಡವು ಕೂಡ ಶಾಂತಿಯ ತಾಣವಾದ ಕರ್ನಾಟಕಕ್ಕೆ ಬೆಂಕಿ ಹಚ್ಚಲು ಬರಲಿದೆ.

ಈ ಚುನಾವಣೆಯಲ್ಲಿ ಮತ ಹಾಕುವ ಮುನ್ನ ಮತದಾರರು ಬಿಜೆಪಿಯ ಹಿಂದಿನ ಐದು ವರ್ಷಗಳ ಆಡಳಿತ ಮತ್ತು ಕಾಂಗ್ರೆಸ್‌ನ ಇಂದಿನ ಐದು ವರ್ಷಗಳ ಆಡಳಿತವನ್ನು ಪರಾಮರ್ಶಿಸಿ ಮತ ಹಾಕುವುದು ಸೂಕ್ತ. ಕಾಂಗ್ರೆಸ್‌ನ ಐದು ವರ್ಷಗಳ ಆಡಳಿತದಲ್ಲಿ ಯಾವುದೇ ದೊಡ್ಡ ಹಗರಣ ನಡೆದಿಲ್ಲ. ಭ್ರಷ್ಟಾಚಾರದ ಆರೋಪದ ಮೇಲೆ ಯಾರೂ ಜೈಲಿಗೆ ಹೋಗಿಲ್ಲ. ಐದು ವರ್ಷ ಕಾಲ ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಸ್ಥಿರವಾದ ಆಡಳಿತ ನೀಡಿದ್ದಾರೆ. ಇದರ ಜೊತೆಗೆ ಅನ್ನಭಾಗ್ಯದಂತಹ ಯೋಜನೆ ಕರ್ನಾಟಕದ 4 ಕೋಟಿ ಜನರ ಹಸಿವನ್ನು ನೀಗಿಸಿದೆ.

ಈ ಚುನಾವಣೆ ಮುಂದಿನ ಐದು ವರ್ಷಗಳ ಕಾಲ ಕರ್ನಾಟಕದ ಮಾತ್ರವಲ್ಲ ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ. ಇಲ್ಲಿ ಬಿಜೆಪಿ ಗೆದ್ದರೆ, ಮೀಸಲಾತಿಗೆ ಗಂಡಾಂತರ ಬರಲಿದೆ. ಅಲ್ಪಸಂಖ್ಯಾತರ ಬದುಕು ನರಕವಾಗಲಿದೆ. ಪರಿಶಿಷ್ಟ ವರ್ಗ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಗೆ ಆಪತ್ತು ಬರಲಿದೆ. ಅಸಾರಾಂ ಬಾಪೂ ರಂತಹ  ಸನ್ಯಾಸಿಗಳು ವಿಜೃಂಭಿಸಲಿದ್ದಾರೆ. ಕಾರ್ಮಿಕ ಕಾನೂನಿಗೆ ತಿದ್ದುಪಡಿ ತಂದು ದುಡಿಯುವ ಜನರನ್ನು ಗುಲಾಮಗಿರಿಗೆ ತಳ್ಳಲಾಗುವುದು. ಮಹಿಳೆಯರ ಬದುಕು ಇನ್ನೂ ಅಸಹನೀಯವಾಗಲಿದೆ. ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣ ಕುಸಿದು ಬೀಳುತ್ತದೆ. ಇದನ್ನೆಲ್ಲ ಗಮನಿಸಿ, ಜನ ತಮ್ಮ ಆದೇಶವನ್ನು ನೀಡಬೇಕು.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X