ದ್ವಿತೀಯ ಪಿಯುಸಿ ಫಲಿತಾಂಶ: ಮತ್ತೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡ ದ.ಕ. ಜಿಲ್ಲೆ

ಮಂಗಳೂರು, ಎ. 30: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷ ಅಂದರೆ 2016-17ನೆ ಸಾಲಿನಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ದ್ವಿತೀಯ ಪಿಯುಸಿಯಲ್ಲಿ ಅಗ್ರ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಶೇ. 91.49 ಫಲಿತಾಂಶವನ್ನು ದಾಖಲಿಸಿರುವ ದಕ್ಷಿಣ ಕನ್ನಡ ಕಳೆದ ವರ್ಷ 89.92 ಫಲಿತಾಂಶವನ್ನು ದಾಖಲಿಸಿತ್ತು.
ಈ ಹಿಂದಿನ ಸತತ ಮೂರು ವರ್ಷಗಳಿಂದ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಹ್ಯಾಟ್ರಿಕ್ ಸಾಧನೆ ಮೆರೆದಿದ್ದ ದ.ಕ. ಜಿಲ್ಲೆ 2016-17ನೆ ಸಾಲಿನಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಶೇಕಡಾವಾರು ಫಲಿತಾಂಶದಲ್ಲಿಯೂ ಕಳೆದೆರಡು ವರ್ಷಗಳಿಂದ ಏರಿಕೆಯನ್ನು ದಾಖಲಿಸಿದೆ.
2015-2016ರಲ್ಲಿ ಶೇ. 90.48 ಫಲಿತಾಂಶವನ್ನು ದಾಖಲಿಸಿತ್ತು. 2014ರಿಂದ 2016ರವರೆಗೆ ಸತತ ಮೂರು ಬಾರಿ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದಿತ್ತು. 2013-2014ರಲ್ಲಿ ಶೇ. 86.04 ಫಲಿತಾಂಶ ಪಡೆದಿದ್ದ ದ.ಕ. ಜಿಲ್ಲೆ 2014-2015ನೆ ಸಾಲಿನಲ್ಲ್ಲಿ ಶೇ. 93.09 ಫಲಿತಾಂಶವನ್ನು ದಾಖಲಿಸಿತ್ತು. 2012-2013ನೆ ಸಾಲಿನಲ್ಲಿ ದಕ್ಷಿಣ ಕನ್ನಡ ದ್ವಿತೀಯ ಸ್ಥಾನದಲ್ಲಿತ್ತು.