ಚುನಾವಣಾ ಆಯೋಗದ ರಾಯಭಾರಿಗಳಾಗಿ ಅಶ್ವಿನಿ ಅಂಗಡಿ- ಗಿರೀಶ್ ನೇಮಕ

ಬೆಂಗಳೂರು, ಎ.30: ದೃಷ್ಟಿ ಹೀನರಾಗಿರುವ ಬೆಳಕು ಅಕಾಡೆಮಿ ಸಂಸ್ಥಾಪಕಿ ಅಶ್ವಿನಿ ಅಂಗಡಿ ಹಾಗೂ 2012ರ ಪ್ಯಾರಾ ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಗಿರೀಶ್‌ರನ್ನು ಚುನಾವಣಾ ಆಯೋಗವು ತನ್ನ ರಾಯಭಾರಿಯಾಗಿ ನೇಮಕ ಮಾಡಿದೆ.
ಸೋಮವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್, ಈ ವಿಷಯವನ್ನು ಪ್ರಕಟಿಸಿದರು. ಅಲ್ಲದೆ, ಜನತೆಯಲ್ಲಿ ಮತದಾನದ ಜಾಗೃತಿ ಮೂಡಿಸಲು ಇವರಿಬ್ಬರು ನೀಡಿರುವ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಲಾಯಿತು.
ಪರಿಹಾರ ಮಂಜೂರು: ರಾಮನಗರ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಕರ್ತವ್ಯದಲ್ಲಿರುವಾಗ ರಸ್ತೆ ಅಪಘಾತದಲ್ಲಿ ನಿಧನರಾದ ಹೆಡ್ ಕಾನ್ಸ್‌ಟೇಬಲ್ ಮಹಾಲಿಂಗಯ್ಯ ಎಂಬವರಿಗೆ ಭಾರತೀಯ ಚುನಾವಣಾ ಆಯೋಗವು 20 ಲಕ್ಷ ರೂ.ಪರಿಹಾರ ಮಂಜೂರು ಮಾಡಿದ್ದು, ಶೀಘ್ರದಲ್ಲೆ ಅವರಿಗೆ ತಲುಪಿಸಲಾಗುವುದು ಎಂದು ಸಂಜೀವ್‌ಕುಮಾರ್ ಹೇಳಿದರು.
ರಾಜ್ಯದಲ್ಲಿ ಈವರೆಗೆ ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ 55.16 ಕೋಟಿ ರೂ.ನಗದು ಜಪ್ತಿ ಮಾಡಲಾಗಿದೆ. ಅಲ್ಲದೆ, 22.15 ಕೋಟಿ ರೂ.ವೌಲ್ಯದ 4.80 ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಕೆಲವೆಡೆ 7 ದಿನ, 12 ದಿನ ಮದ್ಯಮಾರಾಟ ನಿಷೇಧಿಸಿರುವುದಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಮತದಾನದ 48 ಗಂಟೆ ಮುಂಚೆ ಮಾತ್ರ ಮದ್ಯ ಮಾರಾಟ ನಿರ್ಬಂಧಿಸಲಾಗುತ್ತದೆ. ಉಳಿದಂತೆ ಬೇರೆ ಯಾವುದೆ ದಿನ ನಿರ್ಬಂಧ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೆಲವು ಸಿನಿಮಾ ಹಾಗೂ ಧಾರವಾಹಿ ಕಲಾವಿದವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಅಭಿನಯಿಸುತ್ತಿರುವ ಸಿನಿಮಾ, ಧಾರಾವಾಹಿಯ ಪ್ರಸಾರವನ್ನು ನಿಷೇಧಿಸಬೇಕು ಎಂಬ ಮನವಿ ಬಂದಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗವು ಕೇವಲ ದೂರದರ್ಶನದಲ್ಲಿ ಪ್ರಸಾರವಾಗುವ ಸಿನಿಮಾ, ಧಾರವಾಹಿಗಳಿಗೆ ಮಾತ್ರ ಈ ನಿಷೇಧ ಅನ್ವಯವಾಗುತ್ತದೆ. ಖಾಸಗಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಅವರು ಹೇಳಿದರು.







