10.8 ಲಕ್ಷ ಉದ್ಯೋಗಗಳನ್ನು 1.50 ಕೋಟಿಯೆಂದು ತಿರುಚಿತೇ ಪ್ರಧಾನಿ ಸಲಹಾ ಮಂಡಳಿ?

ಹೊಸದಿಲ್ಲಿ,ಎ.30: 2017ರಲ್ಲಿ ಭಾರತವು 1.50 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆಯೆಂದು ಪ್ರತಿಪಾದಿಸುವುದಕ್ಕಾಗಿ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ(ಪಿಎಂಇಎಸಿ)ರಾದ ಸುರ್ಜಿತ್ ಭಲ್ಲಾ ಅವರು ರಾಷ್ಟ್ರಮಟ್ಟದ ಉದ್ಯೋಗ ಸಮೀಕ್ಷಾ ವರದಿಯನ್ನು ತಿರುಚಿದ್ದಾರೆ ಹಾಗೂ ಅಪ್ರಾಮಾಣಿವಾಗಿ ಮಂಡಿಸಿದ್ದಾರೆಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ)ವು ಆಪಾದಿಸಿದೆ.
ಸಿಎಂಐಇ ನಡೆಸಿದ ಭಾರತದ ಅತಿ ದೊಡ್ಡ ಉದ್ಯೋಗ ಸಮೀಕ್ಷೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನದಲ್ಲಿ ಸುರ್ಜಿತ್ ಭಲ್ಲಾ ಅವರು ಸಿಎಂಐಎ ಸಮೀಕ್ಷೆಯ ಅಂಕಿಅಂಶಗಳನ್ನು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ)ಯ ದತ್ತಾಂಶಗಳನ್ನು ನೀಡಿದ್ದು, 2017ರಲ್ಲಿ ದೇಶದಲ್ಲಿ 1.50 ಕೋಟಿ ಉದ್ಯೋಗಿಗಳು ಸೃಷ್ಟಿಯಾಗಿರುವ ಸಾಧ್ಯತೆಯಿರುವುದಾಗಿ ಹೇಳಿದ್ದರು.
ಆದಾಗ್ಯೂ ರಾಷ್ಟ್ರೀಯ ಉದ್ಯೋಗ ಸಮೀಕ್ಷೆ ನಡೆಸಿದ ಸಂಸ್ಥೆಯಾದ ಸಿಎಂಐಇನ ವರಿಷ್ಠ ಮಹೇಶ್ ವ್ಯಾಸ್ ಅವರು, ತನ್ನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 2017ರ ಸಾಲಿನಲ್ಲಿ ದೇಶಾದ್ಯಂತ ಕೇವಲ 10.80 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿರುವುದಾಗಿ ತಿಳಿಸಿದ್ದರು.
ಭಲ್ಲಾ ಅವರು ಸಿಎಂಐಇ ದತ್ತಾಂಶ ಸಮೀಕ್ಷೆಯ ಒಂದು ಭಾಗವನ್ನು ಹಾಗೂ ಇಪಿಎಂಫ್‌ಓ ಚಂದಾದಾರ ಸಮೀಕ್ಷೆಯ ಇನ್ನೊಂದು ಭಾಗವನ್ನು ಬಳಸಿಕೊಂಡು, ಅವರಾಗಿಯೇ ಒಂದು ದತ್ತಾಂಶವನ್ನು ‘ಕಂಡುಹಿಡಿದಿದ್ದಾರೆ’ ಎಂದು ವ್ಯಾಸ್ ಟೀಕಿಸಿದ್ದಾರೆ.
ತನ್ನ ವಿಶ್ಲೇಷಣೆಯಲ್ಲಿ ಭಲ್ಲಾ ಅವರು 25ರಿಂದ 64ರ ವಯೋಗುಂಪಿನಲ್ಲಿ 2017ರಲ್ಲಿ ಉದ್ಯೋಗ ಸೃಷ್ಟಿಯ ವಿವರಗಳನ್ನು ಪಡೆಯಲು ಸಿಎಂಐಇ ಸಮೀಕ್ಷಾ ವರದಿಯನ್ನು ಅವಲಂಭಿಸಿದ್ದಾರೆ. 25-64ರ ವಯೋಗುಂಪಿನವರಲ್ಲಿ 2017ರಲ್ಲಿ ಕೇವಲ 1.18 ಕೋಟಿ ಉದ್ಯೋಗಗಳು ಸೃಷ್ಟಿಯಾಗಿರುವುದಾಗಿ ಹೇಳಿದ್ದರು.
ಆದರೆ ವ್ಯಾಸ್ ಅವರ ಪ್ರಕಾರ ಕಳೆದ ವರ್ಷ 15ರಿಂದ 24 ವರ್ಷ ವಯೋಗುಂಪಿನವರ ಉದ್ಯೋಗ ಸೃಷ್ಟಿಯಲ್ಲಿ ಗಣನೀಯ ಇಳಿಕೆಯಾಗಿದ್ದು, ಸುಮಾರು 70 ಲಕ್ಷ ಉದ್ಯೋಗಗಳು ನಷ್ಟವಾಗಿವೆ. 65 ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಸಿನ ಶ್ರೇಣಿಯವರಲ್ಲೂ ಸುಮಾರು 30 ಲಕ್ಷದಷ್ಟು ಉದ್ಯೋಗಗಳು ಕಡಿಮೆಯಾಗಿವೆ. ಸಿಎಂಐಇ ಸಮೀಕ್ಷೆಯ ಪ್ರಕಾರ 2017ರಲ್ಲಿ ಉದ್ಯೋಗದ ನಿವ್ವಳ ಬೆಳವಣಿಗೆಯು ಕೇವಲ 10.80 ಲಕ್ಷಗಳಾಗಿವೆ. ಇಪಿಎಫ್‌ಒ./ಇಎಸ್‌ಐಸಿ ಚಂದಾದಾರರ ವರ್ಗದಲ್ಲಿನ ಬೆಳವಣಿಗೆಯನ್ನು ಆಧರಿಸಿ, ಪ್ರಧಾನಿಯವರು 2017ರಲ್ಲಿ 70 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿ ರುವುದಾಗಿ ಸ್ವತಃ ಘೋಷಿಸಿಕೊಂಡಿದ್ದರು. ಆದಾಗ್ಯೂ ಪ್ರಧಾನಿ, ಇಪಿಎಫ್‌ಒ ಚಂದಾದಾರರ ದತ್ತಾಂಶಗಳನ್ನು ಆಧರಿಸಿ ಈ ಹೇಳಿಕೆ ನೀಡಿದ್ದಾರೆಂದು ಅರ್ಥಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದರು.
ಉದ್ಯೋಗ ಸೃಷ್ಟಿಯಲ್ಲಿನ ಬೆಳವಣಿಗೆಯನ್ನು ಕಂಡುಹಿಡಿಯಲು ಉದ್ಯೋಗಿಗಳ ಭವಿಷ್ಯನಿಧಿಯ ಚಂದಾದಾರರ ಅಂಕಿಸಂಖ್ಯೆಯನ್ನು ಬಳಸುವ ಪದ್ಧತಿಯನ್ನು ಬಹುತೇಕ ಅರ್ಥಶಾಸ್ತ್ರಜ್ಞರು ವಿರೋಧಿಸಿದ್ದಾರೆ. ನೀತಿ ಆಯೋಗದ ಅಧ್ಯಕ್ಷ ಅರವಿಂದ ಪನಾಗಾರಿಯಾ ಕೂಡಾ ಉದ್ಯೋಗ ಸೃಷ್ಟಿಯನ್ನು ಕಂಡುಹಿಡಿಯಲು ಇಪಿಎಫ್‌ಒ ದತ್ತಾಂಶಗಳನ್ನು ಮಾನದಂಡವಾಗಿ ಬಳಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಉದಾಹರಣೆಗೆ, ಒಂದು ಸಣ್ಣ ಸಂಸ್ಥೆಯಲ್ಲಿ ಕೇವಲ 19 ಉದ್ಯೋಗಿಗಳಿದ್ದರೆ ಅವರೆಲ್ಲರೂ ಇಪಿಎಫ್‌ಒ ನ ವ್ಯಾಪ್ತಿಯಿಂದ ಹೊರಗಿರುತ್ತಾರೆ. ಆದರೆ ಅದೇ ಸಂಸ್ಥೆಗೆ ಓರ್ವ ಉದ್ಯೋಗಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡಲ್ಲಿ, ಅವರೆಲ್ಲರೂ ಇಪಿಎಫ್‌ಒಗೆ ನೋಂದಣಿಯಾಗಬೇಕಾಗುತ್ತದೆ. ಹೀಗಾಗಿ ಇಪಿಎಫ್‌ಒಗೆ ನೋಂದಣಿಯಾದ ಈ 20 ಮಂದಿ ನೌಕರರನ್ನು ಹೊಸ ಉದ್ಯೋಗಿಗಳೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಪನಾಗಾರಿಯಾಹೇಳುತ್ತಾರೆ.







