ಬೆಂಗಳೂರು: ಸ್ವರಾಜ್ ಇಂಡಿಯಾ ಅಭ್ಯರ್ಥಿ ವಿರುದ್ಧ ಎಫ್‌ಐಆರ್
ಬೆಂಗಳೂರು, ಎ.30: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ರಮೇಶ್ ಚಂದರ್ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಚುನಾವಣಾ ಅಕ್ರಮ ಪತ್ತೆಗೆ ರಚಿಸಲಾಗಿರುವ ಸಂಚಾರ ದಳದ ಅಧಿಕಾರಿ ಎನ್.ಅವಿನಾಶ್ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಯೋಗದ ಅನುಮತಿ ಪಡೆಯದೆ ಮಾರತ್ತಹಳ್ಳಿ ಸೇತುವೆ ಬಳಿ ಅಕ್ರಮವಾಗಿ ಮಳಿಗೆ ತೆರೆದಿದ್ದ ರಮೇಶ್, ಕರಪತ್ರಗಳನ್ನು ಹಂಚುತ್ತಿದ್ದರು. ಮುದ್ರಣಾಲಯದ ಹೆಸರು ಹಾಗೂ ಮುದ್ರಿಸಿದ ಪ್ರತಿಗಳು ಎಷ್ಟು ಎಂಬುದನ್ನು ಕರಪತ್ರದಲ್ಲಿ ಬರೆದಿರಲಿಲ್ಲ. ಅಕ್ರಮವಾಗಿ ದುಂದು ವೆಚ್ಚ ಮಾಡಿರುವುದು ಗಮನಕ್ಕೆ ಬಂದಿದೆ. ಇದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ದೂರಿನಲ್ಲಿ ಅವಿನಾಶ್ ತಿಳಿಸಿದ್ದಾರೆ.
Next Story





