ಅಧ್ಯಾತ್ಮವಿಲ್ಲದ ಆಧುನಿಕತೆ ಆತ್ಮವಿಲ್ಲದ ದೇಹದಂತೆ: ಪೇಜಾವರ ಶ್ರೀ

ಉಡುಪಿ, ಎ.30: ಪಲಿಮಾರು ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭವು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು.
ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಅಧ್ಯಾತ್ಮವಿಲ್ಲದ ಆಧುನಿಕತೆ ಆತ್ಮವಿಲ್ಲದ ದೇಹದಂತೆ. ಆದುದರಿಂದ ಧಾರ್ಮಿಕತೆ ಎಂಬುದು ಎಲ್ಲರಿಗೂ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪರ್ಯಾಯ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ ಜ್ಞಾನದಿಂದ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರದ ಅಡಿಗಲ್ಲು ಹಾಕಿಸಿ ಮಕ್ಕಳನ್ನು ಬೆಳೆಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಪ್ರಯಾಗ ಮಠದ ಶ್ರೀಸತ್ಯಾತ್ಮ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಉತ್ತಮ ಅಂಕಗಳನ್ನು ಪಡೆದ ಶಿಬಿರದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಮಠದ ವಿದ್ವಾಂಸ ಕಲ್ಮಂಜೆ ವಾಸುದೇವ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story





