ನಮ್ಮ ಶರೀರದಲ್ಲಿಯ ಪೊಟ್ಯಾಷಿಯಂ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಹೇಗೆ?
ಪೊಟ್ಯಾಷಿಯಂ ನಮ್ಮ ಶರೀರದ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಆದರೆ ನಾವು ಸೇವಿಸುವ ಆಹಾರದಿಂದ ಸಾಕಷ್ಟು ಪೊಟ್ಯಾಷಿಯಂ ಶರೀರಕ್ಕೆ ಸಿಗದಿರಬಹುದು.
ಪೊಟ್ಯಾಷಿಯಂ ನಮ್ಮ ಶರೀರಲ್ಲಿರುವ ದ್ರವಗಳ ಸಮತೋಲನ ಕಾಯ್ದುಕೊಳ್ಳುವಲ್ಲಿ ನೆರವಾಗುವ ಜೊತೆಗೆ ಮಿದುಳು, ನರಗಳು, ಹೃದಯ ಮತ್ತು ಮಾಂಸಖಂಡಗಳು ಸಹಜವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಶರೀರದಿಂದ ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ನೆರವಾಗುವ ಅದು ಅಧಿಕ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.
ಅದು ಮೂಳೆ ನಷ್ಟದ ವಿರುದ್ಧ ರಕ್ಷಣೆಯನ್ನು ನೀಡುವ ಮೂಲಕ ಮೂಳೆಗಳನ್ನು ಸದೃಢಗೊಳಿಸುವ ಜೊತೆಗೆ ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ತಗ್ಗಿಸುತ್ತದೆ. ಕೆಲವು ತೀವ್ರ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಪ್ರತಿದಿನ ಸಾಕಷ್ಟು ಪೊಟ್ಯಾಷಿಯಂ ಸೇವನೆ ಅಗತ್ಯವಾಗಿದೆ. ಪೊಟ್ಯಾಷಿಯಂ ಕೊರತೆ ನಮ್ಮ ಆರೋಗ್ಯವನ್ನು ಹಲವು ವಿಧಗಳಲ್ಲಿ ಹದಗೆಡಿಸಬಹುದು. ವಯಸ್ಕರು ಪ್ರತಿದಿನ 4700 ಮಿಲಿಗ್ರಾಂ ಪೊಟ್ಯಾಷಿಯಂ ಸೇವಿಸಬೇಕು ಎನ್ನುತ್ತಾರೆ ತಜ್ಞರು. ಪೊಟ್ಯಾಷಿಯಂ ಕೊರತೆಯು ನಿಶ್ಶಕ್ತಿ,ಬಳಲಿಕೆ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಅದು ಪಾರ್ಶ್ವವಾಯು ಮತ್ತು ಉಸಿರಾಟ ವ್ಯವಸ್ಥೆಯ ವೈಫಲ್ಯಕ್ಕೂ ಕಾರಣವಾಗಬಹುದು. ಪೊಟ್ಯಾಷಿಯಂ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ,ಜೊತೆಗೆ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಗೊಳಿಸುತ್ತದೆ. ಬೀಟ್ ಗ್ರೀನ್ಸ್,ಸೋಯಾ ಬೀನ್ ಮತ್ತು ವೈಟ್ ಬೀನ್ಸ್ನಂತಹ ಆಹಾರಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ ಅನ್ನು ಒಳಗೊಂಡಿವೆ. ಪೊಟ್ಯಾಷಿಯಂ ಪೂರಕಗಳ ರೂಪದಲ್ಲಿಯೂ ದೊರೆಯುತ್ತದೆ,ಆದರೆ ಆಹಾರದ ಮೂಲಕ ದೊರೆಯುವ ಪೊಟ್ಯಾಷಿಯಂ ಹೆಚ್ಚು ಆರೋಗ್ಯಕರ ಎಂದು ಪರಿಗಣಿಸಲಾಗಿದೆ.
ಶರೀರದಲ್ಲಿ ಪೊಟ್ಯಾಷಿಯಂ ಮಟ್ಟವು ಇಳಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಕಡಿಮೆಯಾಗುತ್ತದೆ. ಇದು ಬೆವರುವಿಕೆ, ನಿಶ್ಶಕ್ತಿ, ತಲೆನೋವು, ನಡುಗುವಿಕೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದೇ ಕಾರಣದಿಂದ ಮಧುಮೇಹಿಗಳು ತಮ್ಮ ಶರೀರದಲ್ಲಿ ಸಹಜ ಪೊಟ್ಯಾಷಿಯಂ ಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ.
ಸ್ನಾಯುಗಳ ನಿಯಮಿತ ಆಕುಂಚನ ಮತ್ತು ಸಂಕುಚನಕ್ಕೆ ಸಾಕಷ್ಟು ಪೊಟ್ಯಾಷಿಯಂ ಅಗತ್ಯವಾಗಿದೆ.ಶರೀರದಲ್ಲಿಯ ಹೆಚ್ಚಿನ ಪೊಟ್ಯಾಷಿಯಂ ಅಯಾನ್ಗಳು ಸ್ನಾಯುಗಳ ಕೋಶಗಳಲ್ಲಿರುತ್ತವೆ ಮತ್ತು ಇದು ಸ್ನಾಯುಗಳು ಮತ್ತು ನರಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
ಪೊಟ್ಯಾಷಿಯಂ ಶರೀರದಲ್ಲಿಯ ವಿವಿಧ ಆಮ್ಲಗಳನ್ನು ತಟಸ್ಥ ಗೊಳಿಸುವ ಗುಣಗಳನ್ನು ಹೊಂದಿದೆ. ಇದು ಶರೀರವು ಕ್ಯಾಲ್ಸಿಯಂ ಅನ್ನು ಉಳಿಸಿಕೊಳ್ಳಲು ನೆರವಾಗುತ್ತದೆ ಮತ್ತು ಈ ಕ್ಯಾಲ್ಸಿಯಂ ಮೂಳೆಗಳ ಬಳಕೆಗೆ ಲಭ್ಯವಾಗುತ್ತದೆ ಮತ್ತು ಅವು ಸದೃಢಗೊಳ್ಳುತ್ತವೆ.
ಪೊಟ್ಯಾಷಿಯಂ ಹೃದಯದ ಆರೋಗ್ಯವನ್ನು ಮತ್ತು ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ.
ಕಠಿಣ ದೈಹಿಕ ಚಟುವಟಿಕೆಗಳು ಅಥವಾ ವ್ಯಾಯಾಮ ಮಾಡುತ್ತಿರುವವರು ಇಲೆಕ್ಟ್ರೋಲೈಟ್ ಪಾನೀಯಗಳನ್ನು ಸೇವಿಸುವುದರಿಂದ ಪೊಟ್ಯಾಷಿಯಂ ಮಟ್ಟವು ತ್ವರಿತವಾಗಿ ಹೆಚ್ಚುತ್ತದೆ. ಉಪ್ಪು ಮತ್ತು ಸಕ್ಕರೆ ಬೆರೆತ ನೀರು,ಸೀಯಾಳದ ನೀರು,ಶುಂಠಿ ಪಾನೀಯ,ಕಲ್ಲಂಗಡಿ ರಸ,ಸೌತೆ ರಸ ಇತ್ಯಾದಿಗಳು ಇಂತಹ ಇಲೆಕ್ಟ್ರೋಲೈಟ್ ಪಾನೀಯಗಳಾಗಿವೆ. ಬಾಳೆಹಣ್ಣು ಮತ್ತು ಗ್ರೀನ್ ಸಲಾಡ್ ಸೇವನೆಯೂ ಶರೀರದಲ್ಲಿ ಪೊಟ್ಯಾಷಿಯಂ ಮಟ್ಟವನ್ನು ಹೆಚ್ಚಿಸುತ್ತದೆ.