ಕೊಣಾಜೆ: ಅಂತರ್ ಜಿಲ್ಲಾ ಕಳವು ಆರೋಪಿಗಳ ಬಂಧನ
ಕೊಣಾಜೆ, ಎ. 30: ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಗಳಿಬ್ಬರು ತಂದೆ ಮಗನಾಗಿದ್ದು, ಇವರಿಬ್ಬರು ಒಟ್ಟಿಗೆ ಸೇರಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್‌ನ ಮಂಜುನಾಥ ಬೋವಿ (45) ಹಾಗೂ ನಾಗರಾಜ ಬೋವಿ (72) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳು ಕೊಣಾಜೆ ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳು ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 2 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆರೋಪಿಗಳಿಂದ ಪೊಲೀಸರು ಒಟ್ಟು 83 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಇವರಿಬ್ಬರು ಉತ್ತರ ಕನ್ನಡದ ಅಂಕೋಲದ ಬೆಳಸೆ ಎಂಬಲ್ಲಿಯ ಊರಿನವರಾಗಿದ್ದು ಕೆಲಸಕ್ಕೆಂದು ಈ ಭಾಗಕ್ಕೆ ಬಂದಿದ್ದರು. ಕಾರಾವಾರ, ಅಂಕೋಲ, ಭಟ್ಕಳ, ಹೊನ್ನಾವರ, ಚಿತ್ತಕುಲ ಮೊದಲಾದ ವ್ಯಾಪ್ತಿಯಲ್ಲೂ ಕೂಡಾ ಇವರು ಕಳ್ಳತನ ಕೃತ್ಯ ಹಾಗೂ ಒಂದು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸವನ್ನು ಅನುಭವಿಸಿದ್ದರು. ಆರೋಪಿ ಮಂಜುನಾಥ ಕಳೆದ ಆರು ವರ್ಷಗಳಿಂದ ಮಂಗಳೂರಿನ ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದನಲ್ಲದೆ ತಂದೆ ಮಗ ಇಬ್ಬರು ಸೇರಿ ಎಟಿಎಂಗಳಲ್ಲಿ ಕಾವಲುಗಾರರಾಗಿ ಕೆಲಸ ಮಾಡಿಕೊಂಡಿದ್ದರು. ಅಲ್ಲದೆ ಈ ಕೆಲಸಗಳ ನಡುವೆ ಇವರು ಕಳ್ಳತನದಲ್ಲಿ ತೊಡಗಿಸಿ ಕೊಂಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.







