ಭಾರತ-ಆಸ್ಟ್ರೇಲಿಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟ
ನ.21 ರಂದು ಟಿ-20 ಸರಣಿ ಆರಂಭ

ಸಿಡ್ನಿ, ಎ.30: ಭಾರತ ವಿರುದ್ಧ ಆಡಲಿರುವ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿರುವ ಕ್ರಿಕೆಟ್ ಆಸ್ಟ್ರೇಲಿಯ ಮುಖ್ಯಸ್ಥರು ಈವರ್ಷ ಅಡಿಲೇಡ್‌ನಲ್ಲಿ ಮೊದಲ ಹಗಲು-ರಾತ್ರಿ ಟೆಸ್ಟ್ ಆಡುವ ಕುರಿತು ಭಾರತದ ಮನವೊಲಿಸಲು ಬಯಸಿದ್ದಾರೆ.
ಭಾರತ ನ. 21ರಂದು ಪರ್ತ್‌ನಲ್ಲಿ ಮೊದಲ ಟ್ವೆಂಟಿ-20 ಪಂದ್ಯ ಆಡುವ ಮೂಲಕ ಆಸ್ಟ್ರೇಲಿಯ ಪ್ರವಾಸ ಆರಂಭಿಸಲಿದೆ. ಆಸ್ಟ್ರೇಲಿಯ ಅಡಿಲೇಡ್‌ನಲ್ಲಿ ಡಿ.6 ರಿಂದ 10ರ ತನಕ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಭಾರತ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಇತ್ತೀಚೆಗೆ ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ ಹಾಗೂ ಇಂಗ್ಲೆಂಡ್ ವಿರುದ್ಧ ಪಿಂಕ್ ಬಾಲ್‌ನಲ್ಲಿ ಯಶಸ್ವಿಯಾಗಿ ಡೇ-ನೈಟ್ ಪಂದ್ಯವನ್ನು ಆಯೋಜಿಸಿದ್ದ ಕ್ರಿಕೆಟ್ ಆಸ್ಟ್ರೇಲಿಯ ಭಾರತ ವಿರುದ್ಧವೂ ಇದೇ ಪ್ರಯೋಗ ಮುಂದುವರಿಸುವ ವಿಶ್ವಾಸದಲ್ಲಿದೆ.
ಡೇ-ನೈಟ್ ಟೆಸ್ಟ್ ಕ್ರಿಕೆಟ್ ಕ್ರೀಡೆಯ ಭವಿಷ್ಯವಾಗಿದ್ದು ಟಿವಿ ರೇಟಿಂಗ್ಸ್ ನಿಂದ ಬಚಾವ್ ಮಾಡಲು ಇದೊಂದು ಉತ್ತಮ ಹಾದಿಯಾಗಿದೆ ಎಂಬುದು ಆಸ್ಟ್ರೇಲಿಯದ ಅಭಿಪ್ರಾಯವಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಈ ತನಕ ಕ್ರಿಕೆಟ್ ಆಸ್ಟ್ರೇಲಿಯದ ವಾದವನ್ನು ಒಪ್ಪಿಕೊಂಡಿಲ್ಲ. ಡೇ ನೈಟ್ ಟೆಸ್ಟ್ ಆಯೋಜಿಸಲು ಆಕ್ಷೇಪ ವ್ಯಕ್ತಪಡಿಸಿದೆ.
ಮುಂದಿನ ವರ್ಷದ ಜ.24-28ರ ತನಕ ಬ್ರಿಸ್ಬೇನ್‌ನಲ್ಲಿ ಶ್ರೀಲಂಕಾ ವಿರುದ್ಧ ಪಿಂಕ್ ಚೆಂಡಿನಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಲು ಕ್ರಿಕೆಟ್ ಆಸ್ಟ್ರೇಲಿಯ ನಿರ್ಧರಿಸಿದೆ. ನ.4 ರಂದು ದಕ್ಷಿಣ ಆಫ್ರಿಕ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆಡುವ ಮೂಲಕ ಆಸ್ಟ್ರೇಲಿಯದ ಅಂತರ್‌ರಾಷ್ಟ್ರೀಯ ಋತು ಆರಂಭವಾಗಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಅಡಿಲೇಡ್‌ನಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಲಿರುವ ಆಸ್ಟ್ರೇಲಿಯ ಪರ್ತ್ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್, ಮೆಲ್ಬೋರ್ನ್ ಹಾಗೂ ಸಿಡ್ನಿ ಸ್ಟೇಡಿಯಂನಲ್ಲಿ ಮೂರು ಹಾಗೂ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಟೆಸ್ಟ್ ಸರಣಿ ಕೊನೆಗೊಂಡ ಬಳಿಕ ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.







