ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ, ಎ.30: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿರುವ ಅಥ್ಲೀಟ್‌ಗಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಪದಕ ಗೆಲ್ಲದ ಅಥ್ಲೀಟ್‌ಗಳನ್ನ್ನೂ ಶ್ಲಾಘಿಸಿದ ಪ್ರಧಾನಿ ಮೋದಿ, ‘‘ಗೇಮ್ಸ್‌ನಲ್ಲಿ ಅಥ್ಲೀಟ್‌ಗಳ ಪ್ರದರ್ಶನ ಎಲ್ಲರಿಗೂ ಸ್ಫೂರ್ತಿ. ಕ್ರೀಡಾಕ್ಷೇತ್ರದಲ್ಲಿನ ಸಾಧನೆಯು ಭಾರತದ ಘನತೆ ಹೆಚ್ಚಿಸಿದೆ. ಜಾಗತಿಕ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಳುಗಳು ಪದಕ ಜಯಿಸಿದರೆ, ಭಾರತದ ತ್ರಿವರ್ಣ ಧ್ವಜ ರಾರಾಜಿಸುತ್ತದೆ’’ ಎಂದರು. ಭಾರತ ಒಟ್ಟು 66 ಪದಕಗಳನ್ನು(26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚು)ಜಯಿಸುವ ಮೂಲಕ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ‘‘ಕ್ರೀಡಾಪಟುಗಳ ಜೀವನ ಹಲವು ದಶಕಗಳ ಕಾಲ ವಿಸ್ತರಣೆಯಾಗುತ್ತದೆ. ಇದಕ್ಕೆ ಬಾಕ್ಸಿಂಗ್ ತಾರೆ ಮೇರಿಕೋಮ್ ಉತ್ತಮ ನಿದರ್ಶನ. ಹಲವು ಬ್ಯಾಡ್ಮಿಂಟನ್ ಆಟಗಾರರಿಗೆ ಮಾರ್ಗದರ್ಶನ ನೀಡಿರುವ ಪಿ.ಗೋಪಿಚಂದ್ ಆಟಗಾರನಾಗಿಯೂ ಯಶಸ್ವಿಯಾಗಿದ್ದರು. ಕ್ರೀಡಾಪಟುವಿಗೆ ಪ್ರತಿಭೆಯ ಜೊತೆಗೆ ತರಬೇತಿ, ಏಕಾಗ್ರತೆ, ಕಠಿಣ ಪರಿಶ್ರಮದ ಅಗತ್ಯವಿದೆ’’ ಎಂದು ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ನುಡಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋರ್ ಕೂಡ ಇದ್ದರು.





