ನಾನು ಕನ್ನಡಿಗ ಎಂದ ಪ್ರಧಾನಿಗೆ ಐದು ಪ್ರಶ್ನೆಗಳ ಸ್ವಾಗತ ಕೋರಿದ ಸಿದ್ದರಾಮಯ್ಯ !
► #AnswerMadiModi ಟ್ರೆಂಡಿಂಗ್ ► ಉತ್ತರಿಸುವರೇ ಪ್ರಧಾನಿ ಮೋದಿ ?

ಬೆಂಗಳೂರು, ಮೇ 1: ನಾನು ಕನ್ನಡಿಗ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶಿಷ್ಠವಾಗಿ ಕರ್ನಾಟಕಕ್ಕೆ ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಲಿರುವ ಪ್ರಧಾನಿ ಮೋದಿಗೆ ಕನ್ನಡ ಭಾಷೆ, ನೆಲ, ಜಲ ಕುರಿತ ಐದು ಪ್ರಮುಖ ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳಿದ್ದಾರೆ. ನೀವು ಕನ್ನಡಿಗ ಹೌದು ಎಂದಾದರೆ ಈ ಐದು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಪ್ರಧಾನಿಗೆ ಸಿದ್ದರಾಮಯ್ಯ ಕೇಳಿರುವ ಐದು ಪ್ರಶ್ನೆಗಳು ಇಲ್ಲಿವೆ

ಕನ್ನಡಿಗನೆಂದು ಘೋಷಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗ ಅಭಿನಂದನೆ. ಆದರೆ ಕನ್ನಡಿಗನಾಗುವುದೆಂದರೆ ನಾಡಗೀತೆ, ನಾಡಭಾಷೆ ಹಾಗೂ ನಾಡಧ್ವಜವನ್ನು ಒಪ್ಪಿಕೊಳ್ಳುವುದು. ಕನ್ನಡಿಗರ ರಾಜ್ಯಧ್ವಜಕ್ಕೆ ಒಪ್ಪಿಗೆ ನೀಡಿ, ನಿಜವಾದ ಕನ್ನಡಿಗರಾಗುತ್ತೀರಾ ಎಂದು ಟ್ವೀಟ್ ಮೂಲಕ ಮೊದಲ ಪ್ರಶ್ನೆ ಎಸೆದಿದ್ದಾರೆ.

ಕನ್ನಡಿಗನಾದರೆ ನೆಲ, ಜಲ, ಭಾಷೆಯ ರಕ್ಷಣೆಗೆ ಬದ್ಧವಾಗಿರುವುದು. ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆದು ಕನ್ನಡಿಗರಾಗುತ್ತೀರಾ ಎನ್ನುವುದು ಎರಡನೇ ಪ್ರಶ್ನೆ.

ಕನ್ನಡಿಗನಾಗುವುದು ಎಂದರೆ ಬಲಾತ್ಕಾರದ ಹಿಂದಿ ಹೇರಿಕೆಯನ್ನು ಕೈಬಿಡುವುದು ಹಾಗೂ ಕನ್ನಡಕ್ಕೆ ಪ್ರಾಮುಖ್ಯ ಕೊಡುವುದು. ಕನ್ನಡಿಗರಾಗಲು ಸಿದ್ಧರಿದ್ದೀರಾ?

ಕನ್ನಡಿಗನಾಗುವುದೆಂದರೆ ಕನ್ನಡ- ಕನ್ನಡಿಗ- ಕರ್ನಾಟಕದ ಹಿತರಕ್ಷಣೆ. ರಾಷ್ಟ್ರೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡಿಗರಿಗೆ ಕನ್ನಡದಲ್ಲೇ ಬರೆಯಲು ಅವಕಾಶ ನೀಡಿ, ಕನ್ನಡಿಗರಾಗುತ್ತೀರಾ?

ಕನ್ನಡಿಗನಾಗುವುದೆಂದರೆ ಈ ನೆಲದ ಶರಣರು, ಸಂತರು, ದಾಸರು, ಸೂಫಿಗಳು ಹುಟ್ಟುಹಾಕಿದ ಸೌಹಾರ್ದ ಪರಂಪರೆಯನ್ನು ಗೌರವಿಸುವುದು. ಒಬ್ಬನೇ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡದೇ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಎಸೆದಿದ್ದಾರೆ.
ಈ ಐದು ಪ್ರಶ್ನೆಗಳಿಗೆ ಉತ್ತರಿಸುವುದು ಪ್ರಧಾನಿ ಮೋದಿಗೆ ಚುನಾವಣಾ ಪ್ರಚಾರದ ಭಾಷಣ ಮಾಡಿದಷ್ಟು ಸುಲಭವಲ್ಲ. ಅತ್ಯಂತ ಸೂಕ್ಷ್ಮ ಹಾಗು ಅಷ್ಟೇ ರಾಜಕೀಯ ಪರಿಣಾಮ ಬೀರಬಲ್ಲ ಈ ಪ್ರಶ್ನೆಗಳಿಗೆ ಪ್ರಧಾನಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಸದ್ಯಕ್ಕೆ ಸಿದ್ದರಾಮಯ್ಯನವರ #AnswerMadiModi ಟ್ರೆಂಡಿಂಗ್ ಆಗಿದೆ.







