ಪ್ರಧಾನಿ ಮೋದಿಯಿಂದ ಸರಕಾರಿ ಯಂತ್ರದ ದುರ್ಬಳಕೆ: ನಾರಾಯಣ ಸ್ವಾಮಿ ಆರೋಪ

ಮಂಗಳೂರು, ಮೇ 1: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರಿ ಯಂತ್ರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಸಿಬಿಐ ಅಮಿತ್ ಶಾ ಮತ್ತು ಮೋದಿಯ ಜೇಬಿನಲ್ಲಿರುವಂತಿದೆ ಎಂದು ಪುದುಚೇರಿಯ ಮುಖ್ಯಮಂತ್ರಿ ಹಾಗೂ ಎಐಸಿಸಿ ಮುಖಂಡ ನಾರಾಯಣ ಸ್ವಾಮಿ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿ ಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.
ನಾನು ಸಿಬಿಐ ಸಂಸ್ಥೆಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದೇನೆ ಆದರೆ ಅದರ ತನಿಖೆಯಲ್ಲಿ ಹಸ್ತ ಕ್ಷೇಪ ಮಾಡಿಲ್ಲ .ರೆಡ್ಡಿ ಪ್ರಕರಣದಲ್ಲಿ 36 ಸಾವಿರ ಕೋಟಿ ಅವ್ಯವಹಾರದ 64 ಪ್ರಕರಣಗಳ ತನಿಖೆ ಏಕೆ ನಡೆಯುತ್ತಿಲ್ಲ. ಗೋವಾದಲ್ಲಿ ಆರು ಪ್ರಕರಣ ದಾಖಲಾಗಿವೆ ತನಿಖೆ ನಡೆಯುತ್ತಿಲ್ಲ. ಭ್ರ ಷ್ಟಾಚಾರದ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ಯಡಿಯೂರಪ್ಪ ಹಾಗೂ ಶ್ರೀರಾಮಲುವನ್ನು ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಮಾಡಲು ಹೊರಟಿದ್ದಾರೆ.
ಸಿಬಿಐ ಮೋದಿ ಬ್ಯೂರೋ ಆಫ್ ಇನ್‌ವಸ್ಟಿಗೇಶನ್ ಆಗಿದೆ. ಮೋದಿ , ಅಮಿತ್ ಶಾ ಯಾವೂದೇ ಮಾರ್ಗದಿಂದಲಾದರೂ ಅಧಿಕಾರ ಪಡೆಯುವ ಹವಣಿಕೆ ಯಲ್ಲಿದ್ದಾರೆ. ಕರ್ನಾಟಕದಲ್ಲಿ ಮೋದಿ ಅಲೆಯಲ್ಲ ಬಿರುಗಾಳಿ ಇದೆ ಎನ್ನುತ್ತಿದ್ದಾರೆ. ಈ ಬಿರುಗಾಳಿಯಲ್ಲಿ ಕರ್ನಾಟಕ ಕೊಚ್ಚಿ ಹೋಗದಂತೆ ಕರ್ನಾಟಕದ ಜನತೆ ಜಾಗೃತರಾಗಬೇಕಾಗಿದೆ ಎಂದು ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ಜಯವೀರ್ ಶರ್ಗಿಲ್, ಎಐಸಿಸಿ ಮುಖಂಡ ಸುರೇಶ್ ಶೆಟ್ಟಿ, ದ.ಕ. ಜಿಲ್ಲಾ ಕಾಂಗ್ರೆಸ್ ಮುಖಂಡ ಇಬ್ರಾಹೀಂ ಕೋಡಿ ಜಾಲ್ ಮೊದಲಾದವರು ಉಪಸ್ಥಿತರಿದ್ದರು.







