ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಹಿರಂಗ ಕ್ಷಮೆಯಾಚನೆಗೆ ಅಹಿಂದ ವರ್ಗಗಳ ಒಕ್ಕೂಟ ಆಗ್ರಹ
ಬೆಂಗಳೂರು, ಮೇ 1: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರನ್ನು ‘ರಬ್ಬರ್ ಸ್ಟಾಂಪ್’ ಹಾಗೂ ಆ ಸ್ಥಾನಕ್ಕೆ ಅವರು ಅರ್ಹ ವ್ಯಕ್ತಿಯಲ್ಲ ಎಂದು ಅವಹೇಳನಕಾರಿ ಆರೋಪವನ್ನು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಾಬೀತು ಮಾಡಬೇಕು. ಇಲ್ಲವಾದರೆ ಬಹಿರಂಗ ಕ್ಷಮೆ ಕೋರಬೇಕೆಂದು ಅಹಿಂದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.
ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೀರಣ್ಣ, ರತ್ನಪ್ರಭಾ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ ಮಾಜಿ ಸಚಿವ ರೇವಣ್ಣ ಕೂಡಲೇ ಕ್ಷಮೆ ಕೋರದಿದ್ದರೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಲಿತ ಸಮುದಾಯಕ್ಕೆ ಸೇರಿದ ರತ್ನಪ್ರಭಾ ಅವರ ಬಗ್ಗೆ ಅವಹೇಳನಕಾರಿಯಾಗಿ ಆರೋಪ ಮಾಡಿರುವುದು ಅಹಿಂದ ವರ್ಗಕ್ಕೆ ನೋವುಂಟು ಮಾಡಿದೆ. ಒಂದು ವೇಳೆ ರೇವಣ್ಣ ಕ್ಷಮೆಯಾಚಿಸದಿದ್ದರೆ ಈ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಬೇಕೆಂದು ಆಂದೋಲನ ರೂಪಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಸುದ್ಧಿಗೋಷ್ಠಿಯಲ್ಲಿ ದಸಂಸ ಸಂಚಾಲಕ ಸಿದ್ದಲಿಂಗಯ್ಯ, ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







