ಮರಳು ಮಾಫಿಯಾದ ಹಿಂದೆ ಕಾಂಗ್ರೆಸ್ ಸರಕಾರ: ನರೇಂದ್ರ ಮೋದಿ
ಉಡುಪಿಯಲ್ಲಿ ಬಿಜೆಪಿ ಚುನಾವಣಾ ಸಮಾವೇಶ

ಉಡುಪಿ, ಮೇ 1: ರಾಜ್ಯದಲ್ಲಿ ನಡೆಯುತ್ತಿರುವ ಮರಳು ಮಾಫಿಯಾಗೆ ಕಾಂಗ್ರೆಸ್ ಸರಕಾರವೇ ಬೆಂಬಲವಾಗಿ ನಿಂತಿದೆ. ಈ ಮಾಫಿಯಾದ ಜೊತೆ ಸರಕಾರವೇ ಕೈಜೋಡಿಸಿದೆ. ಇಂತಹ ಲೂಟಿಕೋರ ಸರಕಾರ ತೊಲಗಬೇಕಾಗಿದೆ. ಕರ್ನಾಟಕವನ್ನು ಉಳಿಸುವ ಅವಕಾಶ ಇದೀಗ ರಾಜ್ಯದ ಜನತೆಗೆ ಒದಗಿ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇದಲ್ಲಿ ಅವರು ಮಾತನಾಡುತಿದ್ದರು.
ಮಹಾತ್ಮ ಗಾಂಧಿಯ ಕನಸನ್ನು ಕರ್ನಾಟಕದ ಜನತೆ ಪೂರೈಸಬೇಕಾಗಿದೆ. ಈ ದೇಶದಲ್ಲಿ ಕಾಂಗ್ರೆಸ್‌ನ್ನು ವಿಸರ್ಜನೆ ಮಾಡುವುದು ಅವರ ಇಚ್ಛೆಯಾಗಿತ್ತು. ಈಗಾಗಲೇ ನಾವು ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಮೂಲಕ ಗಾಂಧೀಜಿ ಇಚ್ಛೆಯನ್ನು ಪೂರೈಸಿದ್ದೇವೆ. ಈ ಬಾರಿ ಕರ್ನಾಟಕದ್ದು. ಈಗ ನಿಮಗೆ ಗಾಂಧೀಜಿಯ ಇಚ್ಛೆ ಪೂರೈಸುವ ಸೌಭಾಗ್ಯ ದೊರೆತಿದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮುಕ್ತ ಮಾಡಿದರೆ ಗಾಂಧೀಜಿಯ ಆಶೀರ್ವಾದ ನಿಮ್ಮ ಮೇಲೂ ಬರುತ್ತದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶ ಇರಬಾರದು. ಇಂತಹ ಸರಕಾರವನ್ನು ಕೊನೆಗಾಣಿಸದಿದ್ದರೆ ರಾಜ್ಯದ ಯುವ ಜನತೆಯ ಭವಿಷ್ಯ ಉಜ್ವಲ ಆಗಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳ ರಕ್ಷಣೆಗಾಗಿ ಕೇಂದ್ರ ಸರಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ನೀಡುವ ಕಠಿಣ ಕಾನೂನು ಜಾರಿಗೆ ತಂದಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೊಸದಿಲ್ಲಿಗೆ ನನ್ನನ್ನು ಭೇಟಿ ಮಾಡಲು ಬಂದಾಗ ನಾನು ಅವರನ್ನು ಕಾರಿನವರೆಗೆ ಹೋಗಿ ಕರೆದುಕೊಂಡು ಬಂದು ಮಾತನಾಡಿ, ಮತ್ತೆ ಕಾರಿನ ಬಾಗಿಲಿನವರೆಗೆ ಬಿಟ್ಟು ಬರುತ್ತೇನೆ. ರಾಜಕೀಯವಾಗಿ ವಿರೋಧಿಯಾಗಿದ್ದರೂ ಹಿರಿಯರಿಗೆ ನಾವು ತೋರಿಸುವ ಗೌರವ ಆಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಗೌಡರಿಗೆ ಅವಮಾನ ಮಾಡುವ ಮೂಲಕ ಅಹಂಕಾರವನ್ನು ತೋರಿದ್ದಾರೆ. ಇಂತಹ ಅಹಂಕಾರಿಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯಕಾರಿ ಎಂದು ಮೋದಿ ಟೀಕಿಸಿದರು.
ಈ ಭೂಮಿಯ ಯುವ ಕ್ರೀಡಾಪಟು ಗುರುರಾಜ್ ಪೂಜಾರಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪಾತಾಕೆ ಯನ್ನು ಜಗತ್ತಿನ್ನೆಲ್ಲೆಡೆ ಹಾರಿಸಿದರು. ಉಡುಪಿ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಇಡೀ ಕರ್ನಾಟಕದಲ್ಲಿ ಉಡುಪಿಯವರಿಗೆ ಪೈಪೋಟಿ ನೀಡುವವರೇ ಇಲ್ಲವಾಗಿದೆ ಎಂದರು.
40 ವರ್ಷಗಳ ಹಿಂದೆ ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಜನಸಂಘವನ್ನು ಉಡುಪಿಯ ಜನ ಪುರಸಭೆಯಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತಂದರು. ಅವಿಭಜಿತ ದಕ್ಷಿಣ ಜಿಲ್ಲೆಯನ್ನು ‘ದೇವಸ್ಥಾನಗಳ ಭೂಮಿ’ ಮಾತ್ರವಲ್ಲದೆ ‘ಬ್ಯಾಂಕಿಂಗ್‌ನ ಭೂಮಿ’ ಎಂದು ಕೂಡ ಕರೆಯಬಹುದಾಗಿದೆ. ಬ್ಯಾಂಕಿಂಗ್ ಕ್ರಾಂತಿ ಈ ನೆಲದಲ್ಲಿ ನಡೆದಿದೆ. ಟಿ.ಎಂ.ಎ.ಪೈ, ಹಾಜಿ ಸಾಹೇಬ್, ಎ.ಬಿ.ಶೆಟ್ಟಿ ಬ್ಯಾಂಕ್ ಗಳನ್ನು ಸ್ಥಾಪಿಸಿ ಬಡವರು ಕೂಡ ಬ್ಯಾಂಕ್ ಮೆಟ್ಟಿಲು ಏರುವಂತೆ ಮಾಡಿದರು ಎಂದು ಅವರು ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ಮನೆಮನೆ ಭೇಟಿ ನೀಡಿ ಕರ್ನಾಟಕದ ಭವಿಷ್ಯದ ಬಗ್ಗೆ ಮತದಾರರಿಗೆ ಮನನ ಮಾಡಬೇಕು. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ನರೇಂದ್ರ ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನರೇಂದ್ರ ಮೋದಿಗೆ ಯಕ್ಷ ಗಾನದ ಕಿರೀಟ ತೋಡಿಸಿ, ಕೃಷ್ಣ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಉತ್ತರ ಪ್ರದೇಶದ ಸಚಿವ ಮಹೇಂದ್ರ ಸಿಂಗ್, ಮುಖಂಡರಾದ ಓಂ ಪ್ರಕಾಶ್, ಸಂಸದರಾದ ನಳಿನ್‌ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ತುಳು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ
‘ಕರಾವಳಿದ ಮಹಾ ಜನಕುಲೆಗ್ ನಮಸ್ಕಾರೋಲ್’ ಎಂದು ತುಳುವಿನಲ್ಲಿ ಭಾಷಣ ಆರಂಭಿಸಿದ ಮೋದಿ, ನಂತರ ಕನ್ನಡದಲ್ಲಿ ಮಾತನಾಡುತ್ತ ‘ಕರಾವಳಿಯ ಮಹಾಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು. ಇದು ಕನಕದಾಸರಿಗೆ, ಭಗವನ್ ಶ್ರೀಕೃಷ್ಣನರ ಪುಣ್ಯಭೂಮಿ, ಋಷಿ ಪರಶುರಾಮನ ಸೃಷ್ಠಿ, ಮಧ್ವಾಚಾರ್ಯರ ಕರ್ಮಭೂಮಿ, ಅಷ್ಟಮಠ ಯತಿ ಪರಂಪರೆಗೆ ನನ್ನ ಭಕ್ತಿಪೂರ್ವ ಪ್ರಣಾಮಗಳು. ನಿಮ್ಮೇಲ್ಲರಿಗೂ ಮತ್ತೊಮ್ಮೆ ನನ್ನ ನಮಸ್ಕಾರಗಳು ಎಂದರು.
ಕೊನೆಯಲ್ಲಿ ಅವರು ‘ಸ್ವಚ್ಛ, ಸುಂದರ, ಸುರಕ್ಷಿತ ಕರ್ನಾಟಕ ನಿರ್ಮಿಸೊಣ, ಬನ್ನಿ ಎಲ್ಲರೂ ಕೈಜೋಡಿಸಿ, ಸರಕಾರ ಬದಲಾಯಿಸಿ, ಬಿಜೆಪಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಭಾಷಾಂತರ ನಿಲ್ಲಿಸಿದ ಕಾರ್ಯಕರ್ತರು !
ನರೇಂದ್ರ ಮೋದಿ ಹಿಂದಿಯಲ್ಲಿ ಭಾಷಣವನ್ನು ಮಾಡಿದ್ದು, ಆರಂಭದ ಮೊದಲ ವಾಕ್ಯವನ್ನು ಭಾಷಾಂತಾರ ಮಾಡುವಾಗ ಸಭಿಕರು ಮೋದಿಯೇ ಮಾತನಾಡಲಿ, ಭಾಷಾಂತರ ಬೇಡ ಎಂದು ಘೋಷಣೆಗಳನ್ನು ಕೂಗಿದರು. ಬಳಿಕ ನರೇಂದ್ರ ಮೋದಿಯವರೇ ಅನುವಾದಕರನ್ನು ಹಿಂದಕ್ಕೆ ಕಳುಹಿಸಿ, ಹಿಂದಿಯಲ್ಲೇ ಮಾತು ಮುಂದುವರೆಸಿದರು.







