ಬೆಂಗಳೂರು: ಮತದಾನದ ಮಹತ್ವ ಜಾಗೃತಿಗೆ ಕಿರುಚಿತ್ರಗಳ ಬಿಡುಗಡೆ
.jpg)
ಬೆಂಗಳೂರು, ಮೇ 1: ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತಪ್ಪದೆ ಮತದಾನ ಮಾಡಿ ಎನ್ನುವ ಸಂದೇಶವನ್ನೊಳಗೊಂಡ ಕನ್ನಡ ಸಿನಿಮಾ-ಕಿರುತೆರೆ ನಟ-ನಟಿಯರ ಕಿರುಚಿತ್ರಗಳನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಬಿಡುಗಡೆ ಮಾಡಿದರು.
ಮಂಗಳವಾರ ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ನಟ ವಸಿಷ್ಠ ಎನ್.ಸಿಂಹ, ಯುವ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ನಟಿಯರಾದ ರಜನಿ ಮತ್ತು ವೈಷ್ಣವಿ ಅವರು ಮತದಾನದ ಮಹತ್ವ ಕುರಿತು ಮಾತನಾಡಿದ್ದಾರೆ.
ಅಲ್ಲದೆ, ತಪ್ಪದೆ ಮತದಾನ ಮಾಡಲು ಮನವಿ ಮಾಡಿಕೊಂಡಿರುವ ಕಿರುಚಿತ್ರಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಯಲ್ಲಿ ತಮ್ಮ ನಾಯಕ- ನಾಯಕಿಯರು ನೀಡಿರುವ ಕರೆಗೆ ಸಾರ್ವಜನಿಕರು ಓಗೊಟ್ಟು ಮತದಾನ ಮಾಡಿದಲ್ಲಿ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ನಟ ವಸಿಷ್ಠ ಎನ್.ಸಿಂಹ ಮಾತನಾಡಿ, ಚುನಾವಣೆ ರಂಗು-ಗಿಂಗುಗಳ ಮೀರಿ ಮತದಾನ ಮಾಡುವುದು ನಮ್ಮ ಆದ್ಯಕರ್ತವ್ಯವಾಗಬೇಕು. ಕಳೆದ ಚುನಾವಣೆಗಳಿಗಿಂತ ಶೇ.100ಕ್ಕೆ 100ರಷ್ಟು ಮತದಾನವಾಗಬೇಕು. ಸಾರ್ವಜನಿಕರು ಒಂದು ದಿನದ ಆಮಿಷಕ್ಕೆ ಒಳಗಾಗದೆ ಐದು ವರ್ಷಕ್ಕೆ ಸೂಕ್ತವೆನಿಸುವ ನಾಯಕನನ್ನು ಆಯ್ಕೆ ಮಾಡಬೇಕು. ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಿ ತಮ್ಮ ಹಕ್ಕನ್ನು, ಒಳ್ಳೆಯವರನ್ನು ಆಯ್ಕೆ ಮಾಡುವುದಕ್ಕಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಿರುತೆರೆ ನಟಿ ರಜನಿ ಮಾತನಾಡಿ, ಓಟು ಮಾಡುವುದು ನಮ್ಮ ಕರ್ತವ್ಯ. ಪಕ್ಷ ಹಾಗೂ ಆಮಿಷಗಳಿಗೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಮನವಿ ಮಾಡಿದರು. ಈ ವೇಳೆ ನಟ-ನಟಿಯರಿಗೆ ಸನ್ಮಾನ ಮಾಡಿ ಗೌರಸಲಾಯಿತು. ಅಪರ ಮುಖ್ಯ ಚುನಾವಣಾಧಿಕಾರಿ ಡಾ.ಬಿ.ಆರ್.ಮಮತ ಉಪಸ್ಥಿತರಿದ್ದರು.







