ಮಡಿಕೇರಿ: ಕಾಲೇಜುಗಳಲ್ಲಿ ಪಿಯುಸಿ ಫಲಿತಾಂಶ ಪ್ರಕಟ; 3 ಕಾಲೇಜುಗಳಿಗೆ ಶೇ.100 ಫಲಿತಾಂಶ
ವಿಜ್ಞಾನದಲ್ಲಿ ಸ್ವರೂಪ್, ವಾಣಿಜ್ಯದಲ್ಲಿ ಗಗನ್ ಮತ್ತು ಕಲಾ ವಿಭಾಗದಲ್ಲಿ ಭಾವನ ಎಸ್. ರಾವ್ ಜಿಲ್ಲೆಗೆ ಪ್ರಥಮ

ಮಡಿಕೇರಿ,ಮೇ.1: ಪ್ರಸಕ್ತ ಸಾಲಿನ ಪಿಯುಸಿ ಫಲಿತಾಂಶ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಆರ್.ಸ್ವರೂಪ್, ವಾಣಿಜ್ಯ ವಿಭಾಗದಲ್ಲಿ ಗಗನ್ ಮತ್ತು ಕಲಾ ವಿಭಾಗದಲ್ಲಿ ಭಾವನ ಎಸ್.ರಾವ್ ಜಿಲ್ಲೆಗೆ ಪ್ರಥಮ ಸ್ಥಾನದ ಸಾಧನೆ ಮಾಡಿದ್ದಾರೆ.
ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದು, ಜಿಲ್ಲೆಯ ಮಡಿಕೇರಿ ತಾಲೂಕು ಶೇ.89.25, ಸೋಮವಾರಪೇಟೆ ತಾಲೂಕು ಶೇ.86.96 ಹಾಗೂ ವೀರಾಜಪೇಟೆ ತಾಲೂಕು ಶೇ.83.18 ಫಲಿತಾಂಶ ಪಡೆದು ಕೊಂಡಿದೆ.
ವಿಜ್ಞಾನ ವಿಭಾಗದ ಸಾಧಕರು: ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪಲುವಿನ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿ ಆರ್.ಸ್ವರೂಪ್ 590 ಅಂಕ(ಶೇ.98)ಗಳೊಂದಿಗೆ ಜಿಲ್ಲೆಗೆ ಪ್ರಥಮರಾಗಿದ್ದಾರೆ. ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ಎಸ್.ಎಂ.ರಿಶಿರ ಹಾಗೂ ಗೋಣಿಕೊಪ್ಪಲುವಿನ ಕೂರ್ಗ್ ಪಿಯು ಕಾಲೇಜಿನ ವಿಜೇತಾ ಕೆ.ತಂತ್ರಿ 583 ಅಂಕಗಳೊಂದಿಗೆ(ಶೇ.97.17) ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾನಿಕೇತನ ಪಿಯು ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಎ.ಆರ್.ಹಿತ 580 ಅಂಕಗಳೊಂದಿಗೆ (ಶೇ.96.67) ಪಡೆದುಕೊಂಡು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿ ಮಡಿಕೇರಿಯ ಸಂತ ಮೈಕೆಲರ ಪಿಯು ಕಾಲೇಜಿನ ವಿದ್ಯಾರ್ಥಿ ಗಗನ್ 587 ಅಂಕಗಳೊಂದಿಗೆ (ಶೇ.97.83) ಪ್ರಥಮ ಸ್ಥಾನ ಪಡೆದಿದ್ದಾರೆ. ಕುಶಾಲನಗರ ಐಶ್ವರ್ಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಸೋನಿಕಾ 583 ಅಂಕಗಳೊಂದಿಗೆ (ಶೇ.97.17)ದ್ವಿತೀಯ ಸ್ಥಾನ, ಕಳತ್ಮಾಡ್ ಲಯನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನ್ವಿತಾ ಗಣಪತಿ 581 ಅಂಕಗಳೊಂದಿಗೆ (ಶೇ.96.83) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಲಾ ವಿಭಾಗ: ಕಲಾ ವಿಭಾಗದಲ್ಲಿ ಮಡಿಕೇರಿಯ ಸಂತ ಜೋಸೆಫರ ಬಾಲಕಿಯರ ಪಿಯು ಕಾಲೇಜಿನ ವಿಧ್ಯಾರ್ಥಿನಿ ಭಾವನ.ಎಸ್.ರಾವ್ 557 ಅಂಕಗಳೊಂದಿಗೆ (ಶೇ.92.83) ಪ್ರಥಮ ಸ್ಥಾನ ಪಡೆದಿದ್ದಾರೆ. ಮದೆ ಮಹೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿ ಎಚ್.ಎಸ್.ಸತೀಶ್ 544 ಅಂಕಗಳೊಂದಿಗೆ (ಶೇ.90.67) ದ್ವಿತೀಯ ಸ್ಥಾನ ಹಾಗೂ ಮೂರ್ನಾಡಿನ ಮಾರುತಿ ಪಿಯು ಕಾಲೇಜು ವಿದ್ಯಾರ್ಥಿನಿ ಬಿ.ಎ.ಶ್ರುತಿ 542 ಅಂಕಗಳೊಂದಿಗೆ (ಶೇ.90.33) ಫಲಿತಾಂಶ ಪಡೆದುಕೊಂಡು ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
3 ಕಾಲೇಜಿಗೆ ಶೇ.100 ಫಲಿತಾಂಶ: ಮಡಿಕೇರಿ ತಾಲೂಕಿನ ಮೂರ್ನಾಡು ಮಾರುತಿ ಪದವಿ ಪೂರ್ವ ಕಾಲೇಜು, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ವಿಘ್ನೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ವೀರಾಜಪೇಟೆ ತಾಲೂಕಿನ ಸಂತ ಅಂಥೋಣಿ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶವನ್ನು ಪಡೆದುಕೊಂಡಿವೆ.







