ಚಿಕ್ಕಮಗಳೂರು: ಮೇ 3 ರಂದು ಸಂವಿಧಾನ ಉಳಿಸಿ ಕರ್ನಾಟಕ ಜನ ಜಾಗೃತಿ ಸಮಾವೇಶ
ಚಿಕ್ಕಮಗಳೂರು, ಮೇ.1: ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಸಂವಿಧಾನ ಉಳಿಸಿ ಕರ್ನಾಟಕ ಜನ ಜಾಗೃತಿ ಸಮಾವೇಶವನ್ನು ಮೇ 3ರಂದು ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಗೌಸ್ ಮೋಹಿದ್ದೀನ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ನೇತೃತ್ವದ ಕೇಂದ್ರ ಸರಕಾರ ವಿದೇಶದಲ್ಲಿರುವ ಕಪ್ಪುಹಣವನ್ನು ತರುವುದಾಗಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಆದರೆ ಇಂದು ಅಂಬಾನಿ, ಅಧಾನಿ, ಮಲ್ಯ ರಂಥವರು ನಮ್ಮ ದೇಶದ ಹಣವನ್ನೇ ಬೇರೆ ದೇಶಕ್ಕೆ ಕೊಂಡೊಯ್ಯುತ್ತಿದ್ದಾರೆ. ಅಲ್ಲದೆ ಸಂವಿಧಾನವನ್ನೇ ಬದಲಾಯಿಸುವ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಉಳಿವಿಗಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮೇ3ರ ಗುರುವಾರ 3ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ಮೈಸೂರು ಉರಿಲಿಂಗ ಪೆದ್ದುಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಜನಪರ ಹೋರಾಟಗಾರ ಪ್ರಕಾಶ್ ರೈ, ದಲಿತ ಯುವ ನಾಯಕ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ, ದಲಿತ ಹೋರಾಟಗಾರ ಎನ್. ವೆಂಕಟೇಶ್, ಅಮ್ಮ ರಾಮಚಂದ್ರ, ಸೇರಿದಂತೆ ಅನೇಕರು ಭಾಗವಹಿಸುವರು ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಬಾಬಾಬುಡನ್ ಗಿರಿ ಹೋರಾಟ ವಿಜಯೋತ್ಸವದ ಹಿನ್ನೆಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮಹಿಳೆಯರಿಗೆ ಸಹಿ ಸಂಭ್ರಮಿಸಿ ಸೌಹಾರ್ದತೆ ಮೆರೆಯಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿ.ಕೆ.ಹಸನಬ್ಬ, ಪುಟ್ಟಸ್ವಾಮಿ, ಕೆ.ಎಲ್.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.







