ತಾಯ್ನಾಡಿಗೆ ಮರಳುವ ಅನಿವಾಸಿ ಕನ್ನಡಿಗರಿಗೆ ಸಂಪೂರ್ಣ ಸಹಕಾರ: ಕಾಂಗ್ರೆಸ್ ಪ್ರಣಾಳಿಕೆ

ಬೆಂಗಳೂರು, ಮೇ 1: ವಿದೇಶಗಳಿಂದ ಶಾಶ್ವತವಾಗಿ ತಾಯ್ನಾಡಿಗೆ ಮರಳುವ ಅನಿವಾಸಿ ಕನ್ನಡಿಗರಿಗೆ ಕರ್ನಾಟಕ ಸರಕಾರದ ಎನ್ನಾರೈ ಫೋರಂ ಮೂಲಕ ಸರ್ವ ಸಹಕಾರ ನೀಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ತಾಯ್ನಾಡಿಗೆ ಬಂದು ನೆಲೆಸುವ ಅನಿವಾಸಿ ಕನ್ನಡಿಗರಿಗೆ ಅವರ ನಿವಾಸಿ ಸ್ಥಾನಮಾನ (ರೆಸಿಡೆನ್ಸಿಯಲ್ ಸ್ಟೇಟಸ್) ಬದಲಿಸುವ, ತೆರಿಗೆ ವಿಷಯ ಇತ್ಯಾದಿಗಳಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಪ್ರಣಾಳಿಕೆ ಹೇಳಿದೆ.
ಅನಿವಾಸಿ ಕನ್ನಡಿಗರಿಗೆ ಇತರ ಭರವಸೆಗಳು
1. ಎನ್ ಆರ್ ಕೆ ಕಾರ್ಡ್ ಗೆ ಅಧಿಕೃತ ಮಾನ್ಯತೆ ನೀಡುವುದು.
2. ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿ ವಲಸೆ ಸಂಪನ್ಮೂಲ ಕೇಂದ್ರ ಸ್ಥಾಪನೆ.
3. ಪ್ರವಾಸಿ ಗುರುತು ಚೀಟಿ ವಿತರಣೆ.
4. ಎನ್ ಆರ್ ಐ ಹೂಡಿಕೆದಾರರಿಗೆ ರಿಬೇಟ್ ನೀಡುವುದು ಮತ್ತು ಕೈಗಾರಿಕೆ, ಸಂಸ್ಥೆ ಆರಂಭಿಸಲು ಕಡಿಮೆ ಬಡ್ಡಿ ದರದ ಸಾಲ ನೀಡುವುದು.
5. ಅನಿವಾರ್ಯವಾಗಿ ತಾಯ್ನಾಡಿಗೆ ಬಂದು ನೆಲೆಸುವವರಿಗೆ ಬಂಡವಾಳ ಹೂಡಿಕೆಯಲ್ಲಿ ವಿಶೇಷ ರಿಯಾಯಿತಿ ಮತ್ತು ಕನಿಷ್ಟ ಬಡ್ಡಿ ದರದಲ್ಲಿ ಸಾಲ
ಎಲ್ಲ ಕನ್ನಡಿಗರಿಗೆ ಸೌಲಭ್ಯ ತೆರೆಯಲು, ಬೆರೆಯಲು ಸಾಧ್ಯವಾಗುವಂತೆ ಬೆಂಗಳೂರಿನಲ್ಲಿ ಕನ್ನಡ ಭವನ ಸ್ಥಾಪನೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರನ್ನು ಪರಿಗಣಿಸಲಾಗಿಲ್ಲ ಎಂದು ಕೆಲವು ಸಂಘ ಸಂಸ್ಥೆಗಳು ದೂರಿದ್ದ ಹಿನ್ನೆಲೆಯಲ್ಲಿ ರಾಜ್ಯ ಅನಿವಾಸಿ ಭಾರತೀಯರ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಈ ವಿವರಣೆ ನೀಡಿದ್ದಾರೆ.





