ಬಿಜೆಪಿ ಪಕ್ಷಕ್ಕೂ ಒಂದು ಅವಕಾಶ ನೀಡಿ: ನಟ ಸಾಯಿಕುಮಾರ್
ಬಾಗೇಪಲ್ಲಿ,ಮೇ.01: ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಬಿಜೆಪಿ ಪಕ್ಷಕ್ಕೆ ಒಂದು ಅವಕಾಶವನ್ನು ನೀಡುವಂತೆ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ನಟ ಪಿ.ಸಾಯಿಕುಮಾರ್ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣ ಸೇರಿದಂತೆ ತಾಲೂಕಿನ ಗೂಳೂರು ಹೋಬಳಿ ಕೇಂದ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಹಾಲಿ ಶಾಸಕರು ತಮ್ಮ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ಯಾವುದೇ ಶಾಶ್ವತ ಕೆಲಸಗಳನ್ನು ಮಾಡಿಲ್ಲವಾದರೂ ಸಹ ತಾವು 1200 ಕೋಟಿ ರೂ.ಗಳ ಅನುದಾನದಲ್ಲಿ ಈ ಕ್ಷೇತ್ರದ ಅಭಿವೃದ್ದಿಪಡಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರ ತಮ್ಮ ಸ್ವಂತ ಗ್ರಾ.ಪಂ ವ್ಯಾಪ್ತಿಯೇ ಅಭಿವೃದ್ದಿಯಿಂದ ವಂಚಿತವಾಗಿದೆ. ಇನ್ನು ಕ್ಷೇತ್ರದ ಗತಿ ಏನು ? ಎಲ್ಲಿಗೆ ಹೋಯಿತು ಇವರ 1200 ಕೋಟಿ ರೂ. ಗಳು ಎಂದು ಟೀಕಿಸಿದರು.
ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ವೈಯಕ್ತಿಕವಾಗಿ ಉತ್ತಮ ವ್ಯಕ್ತಿಯಾಗಿದ್ದಾರೆ. ಇವರನ್ನು 2 ಸಲ ಶಾಸಕರನ್ನಾಗಿ ಮಾಡಿದ್ದಾರೆ. ಈ ಕ್ಷೇತ್ರದ ಜನತೆ ನೀಡಿರುವ ಅವಕಾಶವನ್ನು ಏಕೆ ಸದುಪಯೋಗಪಡಿಸಿಕೊಳ್ಳಲಿಲ್ಲ ಎಂದ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿ ಮನೋಹರ್ ರವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ 2 ವರ್ಷ ಕಳೆಯಿತು. ಇವರ ಅಧಿಕಾರದ ಅವಧಿಯಲ್ಲಿ ಕ್ಷೇತ್ರ ಅವರ ಕೊಡೆಗೆಯಾದರೂ ಏನು ಎಂದು ಪ್ರಶ್ನಸಿದರು? ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷಕ್ಕೆ ಅಧಿಕಾರ ನೀಡಿದ್ದೀರ. ಈ ಚುನಾವಣೆಯಲ್ಲಿ ನನಗೂ ಒಂದು ಅವಕಾಶವನ್ನು ನೀಡಿ. ಅಭಿವೃದ್ದಿ ಎಂದರೆ ಏನು ಎಂಬುದನ್ನು ತೋರಿಸುತ್ತೇನೆ ಎಂದರು.
ಇದೇ ವೇಳೆ ಪಟ್ಟಣ ಹೊರವಲಯದ ಬ್ಲೂಮ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 591 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ 6ನೇ ರ್ಯಾಂಕ್ ಪಡೆದಿರುವ ವಿದ್ಯಾರ್ಥಿನಿ ಶಫಿಯಾ ರವರನ್ನು ಚುನಾವಣೆ ಪ್ರಚಾರದಲ್ಲಿದ್ದ ಬಿಜೆಪಿ ಅಭ್ಯರ್ಥಿ ಚಿತ್ರ ನಟ ಪಿ.ಸಾಯಿಕುಮಾರ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಎಸ್.ಟಿಬಾಬು, ತೆಲಂಗಾಣ ರಾಜ್ಯ ಮಾಧ್ಯಮ ವಕ್ತಾರೆ ಜಿ.ಅನಿತಾ, ಮಂಜುಳ ಜಯಪ್ರಕಾಶ್, ಕೋತ್ತಪಲ್ಲಿ ವೆಂಕಟೇಶ್, ಮೇಸ್ತ್ರಿ ವೆಂಕಟರಮಣಪ್ಪ, ವೆಂಕಟಲಕ್ಷ್ಮಮ್ಮ, ಬಿಜೆಪಿ ಮೋರ್ಚ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ, ಮುಖಂಡರಾದ ಶಿವಪ್ಪ, ಬಾಬಾಜಾನ್, ಸುರೇಂದ್ರ, ಸುಬ್ರಮಣಿ,ನರಸರೆಡ್ಡಿ, ಸುಧಾಕರ್, ಮೂರ್ತಿ, ನಾಗರಾಜ್ ಮಾದ್ಯಮ ವಕ್ತಾರ ಧೀರಜ್.ಮತ್ತಿತರರು ಹಾಜರಿದ್ದರು.







