ನಾವು ಯಾವತ್ತೂ ಮುಸ್ಲಿಮರ ಮತಗಳನ್ನು ನಿರೀಕ್ಷಿಸುವುದಿಲ್ಲ: ಈಶ್ವರಪ್ಪ

ಶಿವಮೊಗ್ಗ, ಮೇ 1: ‘ಹಿಂದುತ್ವ ಹಾಗು ಮೋದಿ ಅಲೆಯ’ ಮೂಲಕ ಕರ್ನಾಟಕದಲ್ಲಿ ಬಿಜೆಪಿಯು ಸರಕಾರವನ್ನು ಸ್ಥಾಪಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಸಹಕಾರವಿಲ್ಲದೆ ಬಿಜೆಪಿಯು ಬಹುಮತದೊಂದಿಗೆ ಸರಕಾರ ಸ್ಥಾಪಿಸಲಿದೆ. 1999ರಿಂದಲೇ ನಾವು ಮುಸ್ಲಿಮರನ್ನು ಬದಿಗಿರಿಸಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ನಾವು ಯಾವತ್ತೂ ಮುಸ್ಲಿಮರ ಮತಗಳನ್ನು ನಿರೀಕ್ಷಿಸುವುದಿಲ್ಲ” ಎಂದವರು ಸಂದರ್ಶನವೊಂದರಲ್ಲಿ ಹೇಳಿದರು.
ಶಿವಮೊಗ್ಗ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಬಿ.ಪ್ರಸನ್ನ ಕುಮಾರ್ ಅವರ ವಿರುದ್ಧ ಭಾರೀ ಅಂತರದಲ್ಲಿ ಜಯಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು. ಚುನಾವಣಾ ಸಮೀಕ್ಷೆಗಳನ್ನು ನಂಬುವುದಿಲ್ಲ ಎಂದರು. ಕಳೆದ ಬಾರಿ ಪ್ರಸನ್ನ ಕುಮಾರ್ ವಿರುದ್ಧ ಈಶ್ವರಪ್ಪ 6000 ಮತಗಳಿಂದ ಸೋಲನುಭವಿಸಿದ್ದರು.
ಚುನಾವಣೆಯಲ್ಲಿ ಹಿಂದುತ್ವ ಪರಿಣಾಮ ಬೀರಲಿದೆ. ನರೇಂದ್ರ ಮೋದಿ ಅಲೆ ಕೂಡ ರಾಜ್ಯದಲ್ಲಿ ಬಿಜೆಪಿಯು ಅಧಿಕಾರ ಹಿಡಿಯಲು ಪ್ರಮುಖ ಪಾತ್ರ ವಹಿಸಲಿದೆ. ರಾಜ್ಯದಲ್ಲಿ ಮೋದಿ ಅಲೆ ಶಕ್ತಿಶಾಲಿಯಾಗಿದೆ ಎಂದರು.





