ಮೊಟ್ಟೆಯ ಬಗ್ಗೆ ನಿಮಗೆಷ್ಟು ಗೊತ್ತಿದೆ....?
ಹೇರಳ ಪ್ರೋಟಿನ್ ಮತ್ತು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಮೊಟ್ಟೆಯು ಬೆಳಗಿನ ಆಹಾರಕ್ಕೆ ಉತ್ತಮ ಪರ್ಯಾಯವಾಗಿದ್ದು ನಮ್ಮನ್ನು ಫಿಟ್ ಮತ್ತು ಆರೋಗ್ಯಯುತರನ್ನಾಗಿ ಇಡುತ್ತದೆ. ಅದು ನಮ್ಮ ಶರೀರಕ್ಕೆ ಅಗತ್ಯವಾದ ಬಿ-ವಿಟಾಮಿನ್,ಪ್ರೋಟಿನ್ ಮತ್ತು ಪೋಷಕಾಂಶಗಳನ್ನು ಪಡೆಯಲು ರುಚಿಕರ ಆಹಾರವಾಗಿದೆ.
ಆಹಾರದಲ್ಲಿ ಮೊಟ್ಟೆಯು ಸೇರಿದ್ದರೆ ಅದು ಆರೋಗ್ಯಕರ ಆಹಾರ ಎಂದು ಆರೋಗ್ಯ ತಜ್ಞರು ಪರಿಗಣಿಸುತ್ತಾರೆ. ಇತರ ತಿಂಡಿಗಳಿಗೆ ಹೋಲಿಸಿದರೆ ಮೊಟ್ಟೆಗಳು ಸೇರಿರುವ ಬ್ರೇಕ್ಫಾಸ್ಟ್ ಸೇವಿಸುವುದರಿಂದ ಸಕ್ಕರೆ ಮತ್ತು ಕೊಬ್ಬನ್ನೊಳಗೊಂಡಿರುವ ಖಾದ್ಯಗಳನ್ನು ತಿನ್ನಬೇಕೆನಿಸುವುದಿಲ್ಲ ಮತ್ತು ಇದು ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ.
ಸಾವಯವ ಮೊಟ್ಟೆಗಳಲ್ಲಿ ಯಾವುದೇ ಹಾರ್ಮೋನ್, ಆ್ಯಂಟಿಬಯಾಟಿಕ್,ಕ್ರಿಮಿನಾಶಕ ಮತ್ತು ಇತರ ರಾಸಾಯನಿಕಗಳು ಇರುವುದಿಲ್ಲವಾದ್ದರಿಂದ ಅವು ಪರಿಪೂರ್ಣ ಆಹಾರವಾಗಿವೆ.
ಮೊಟ್ಟೆಗಳ ಬಗ್ಗೆ ಬಹುಶಃ ನಿಮಗೆ ತಿಳಿದಿರದ ಮಾಹಿತಿಗಳು ಇಲ್ಲಿವೆ.....
► ಮೊಟ್ಟೆಯ ಹಳದಿ ಭಾಗ ಮಿದುಳಿನ ಬೆಳವಣಿಗೆಗೆ ಸಹಾಯಕ
ಮೊಟ್ಟೆಯ ಹಳದಿ ಭಾಗವು ಕೋಲಿನ್ ಎಂಬ ಬಿ-ಕಾಂಪ್ಲೆಕ್ಸ್ ವಿಟಾಮಿನ್ ಅನ್ನು ಒಳಗೊಂಡಿರುತ್ತದೆ. ಇದು ನಮ್ಮ ನರಮಂಡಲದ ಉತ್ತಮ ಕಾರ್ಯ ನಿರ್ವಹಣೆಗೆ ನೆರವಾಗುವ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕೋಲಿನ್ ಭ್ರೂಣದ ಬೆಳವಣಿಗೆಗೆ ನೆರವಾಗುತ್ತದೆ ಮತ್ತು ಇದೇ ಕಾರಣದಿಂದ ಗರ್ಭಿಣಿಯರಿಗೆ ಮೊಟ್ಟೆ ಸೇವಿಸುವಂತೆ ಶಿಫಾರಸು ಮಾಡಲಾಗುತ್ತದೆ. ಅಲ್ಲದೆ ಕೋಲಿನ್ ನಮ್ಮ ಶರೀರದಲ್ಲಿ ಬಿಥೇನ್ ಆಗಿ ವಿಭಜನೆಗೊಳ್ಳುತ್ತದೆ ಮತ್ತು ಬಿಥೇನ್ ‘ಹ್ಯಾಪಿ ಹಾರ್ಮೋನ್’ಗಳೆಂದೇ ಕರೆಯಲಾಗುವ ಸೆರೊಟೋನಿನ್,ಡೋಪಮೈನ್ ಮತ್ತು ನೋರಿಫೈನ್ಫ್ರೈನ್ ಅನ್ನು ಉತ್ಪತ್ತಿ ಮಾಡುತ್ತದೆ. ಈ ಹಾರ್ಮೋನ್ಗಳು ನಮಗೆ ಆಹ್ಲಾದವನ್ನು ನೀಡುತ್ತವೆ.
► ಮೊಟ್ಟೆ ಪರಿಪೂರ್ಣ ಪ್ರೋಟಿನ್ ಆಹಾರ
ಪ್ರೋಟಿನ್ಯುಕ್ತ ಆಹಾರಗಳ ಪೈಕಿ ಮೊಟ್ಟೆಯು ನಂ.1 ಸ್ಥಾನದಲ್ಲಿದೆ. ಏಕೆಂದರೆ ಮೊಟ್ಟೆಯಲ್ಲಿರುವ ಪ್ರೋಟಿನ್ನ್ನು ನಮ್ಮ ಶರೀರವು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ ಮತ್ತು ಬಳಸಿಕೊಳ್ಳುತ್ತದೆ. ಮೊಟ್ಟೆಯು ಅತ್ಯುನ್ನತ ಗುಣಮಟ್ಟದ ಪ್ರೋಟಿನ್ ಒದಗಿಸುವ ಜೊತೆಗೆ ಹೇರಳ ಉತ್ಕರ್ಷಣ ನಿರೋಧಕಗಳು,ವಿಟಾಮಿನ್ ಎ,ಬಿ12 ಮತ್ತು ಡಿ,ರಿಬೊಫ್ಲಾವಿನ್,ಫಾಲೇಟ್,ರಂಜಕ ಮತ್ತು ಕೋಲಿನ್ ಅನ್ನೂ ಒಳಗೊಂಡಿದೆ. ಬೇಯಿಸಿದ ಒಂದು ಮೊಟ್ಟೆಯಲ್ಲಿ ಆರು ಗ್ರಾಮ್ನಷ್ಟು ಪ್ರೋಟಿನ್ ಇದ್ದು ಮಹಿಳೆಯರಿಗೆ ದೈನಂದಿನ ಪ್ರೋಟಿನ್ ಅಗತ್ಯದ ಶೇ.14 ಮತ್ತು ಪುರುಷರಿಗೆ ಶೇ.11ರಷ್ಟನ್ನು ಒದಗಿಸುತ್ತದೆ.
► ದೇಹತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ
ಮೊಟ್ಟೆಯಲ್ಲಿಯ ಪ್ರೋಟಿನ್ನಿಂದ ಹೊಟ್ಟೆಯು ಸದಾ ತುಂಬಿರುವಂತೆ ಅನಿಸುತ್ತದೆ ಮತ್ತು ಮಧ್ಯೆ ಮಧ್ಯೆ ತಿಂಡಿಗಳನ್ನು ಸೇವಿಸಬೇಕು ಎಂದೆನಿಸುವುದಿಲ್ಲವಾದ್ದರಿಂದ ಅದು ದೇಹತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಒಂದು ದೊಡ್ಡ ಮೊಟ್ಟೆಯು ಸುಮಾರು 70 ಕ್ಯಾಲೊರಿಗಳನ್ನು ಮತ್ತು ಆರು ಗ್ರಾಂ ಪ್ರೋಟಿನ್ ಒಳಗೊಂಡಿರುವುದರಿಂದ ಕಡಿಮೆ ಕ್ಯಾಲೊರಿ ಪ್ರೋಟಿನ್ನ ಅತ್ಯುತ್ತಮ ಮೂಲವಾಗಿದೆ. ಹೀಗಾಗಿ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮೊಟ್ಟೆಯು ಸೂಕ್ತ ಆಹಾರವಾಗಿದೆ.
► ಫಿಟ್ನೆಸ್ ಕಾಯ್ದುಕೊಳ್ಳಲು ಅತ್ಯುತ್ತಮ ಆಹಾರ
ವ್ಯಾಯಾಮದ ಬಳಿಕ ಸಾಕಷ್ಟು ಪ್ರೋಟಿನ್ ಸೇವನೆಯು ಮಾಂಸಖಂಡಗಳ ಅಂಗಾಂಶಗಳ ಪುನರ್ನಿರ್ಮಾಣ ಮತ್ತು ಅವುಗಳ ಸುಸ್ಥಿತಿಗೆ ಅಗತ್ಯವಾಗಿದೆ. ಹೀಗಾಗಿ ವ್ಯಾಯಾಮದ ಬಳಿಕ ಸೇವಿಸುವ ಪೌಷ್ಟಿಕ ಆಹಾರದಲ್ಲಿ ಮೊಟ್ಟೆ ಇರಲೇಬೇಕು. ಸರಿಯಾಗಿ ಬೇಯಿಸಿದ ಮೊಟ್ಟೆಗಳನ್ನು ಹಣ್ಣುಗಳ ಜೊತೆ ಸೇವಿಸಿದರೆ ಹೆಚ್ಚು ಪರಿಣಾಮ ಕಾರಿಯಾಗಿರುತ್ತದೆ.
► ಅತ್ಯುತ್ತಮ ವಿಟಾಮಿನ್ ಡಿ ಮೂಲ
ನಮ್ಮ ಶರೀರವು ಸೂರ್ಯನ ಬಿಸಿಲಿನಿಂದ ಮತ್ತು ನಾವು ಸೇವಿಸುವ ಕೆಲವು ಆಹಾರಗಳಿಂದ ತನಗೆ ಅಗತ್ಯವಾದ ಪ್ರೋಟಿನ್ನ್ನು ಹೀರಿಕೊಳ್ಳುತ್ತದೆ. ಮೊಟ್ಟೆಯಲ್ಲಿ ವಿಟಾಮನ್ ಡಿ ಹೇರಳವಾಗಿದ್ದು,ಈ ವಿಟಾಮಿನ್ ಅನ್ನು ಹೊಂದಿರುವ ಕೆಲವೇ ನೈಸರ್ಗಿಕ ಆಹಾರ ಮೂಲಗಳಲ್ಲೊಂದಾಗಿದೆ. ಮೊಟ್ಟೆಯನ್ನು ಆಹಾರದಲ್ಲಿ ಸೇವಿಸುವುದರಿಂದ ಅದು ವಿಟಾಮಿನ್ ಡಿ ಕೊರತೆಯನ್ನು ನೀಗಿಸಲು ನೆರವಾಗುತ್ತದೆ. ನೀವು ಸೂರ್ಯನ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವುದಿಲ್ಲವಾದರೆ ನಿಮ್ಮ ದೈನಂದಿನ ವಿಟಾಮಿನ್ ಡಿ ಪಡೆಯಲು ಮೊಟ್ಟೆ ಅತ್ಯುತ್ತಮ ಮೂಲವಾಗಿದೆ. ಒಂದು ಮೊಟ್ಟೆಯ ಹಳದಿ ಭಾಗವು ನಮ್ಮ ದೈನಂದಿನ ವಿಟಾಮಿನ್ ಡಿ ಅಗತ್ಯದ ಶೇ.10ರಷ್ಟನ್ನು ಒದಗಿಸುತ್ತದೆ.
► ಮೊಟ್ಟೆಯ ಬಣ್ಣ ಪೌಷ್ಟಿಕಾಂಶಗಳ ಮೇಲೆ ಪರಿಣಾಮ ಬೀರುವುದಿಲ್ಲ
ಕಂದುಬಣ್ಣದ ಮೊಟ್ಟೆ ಬಿಳಿಯಬಣ್ಣದ ಮೊಟ್ಟೆಗಿಂತ ಹೆಚ್ಚು ಆರೋಗ್ಯಕರವೆಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಮೊಟ್ಟೆಯ ಕವಚದ ಬಣ್ಣಕ್ಕೂ ಅದರ ಗುಣಮಟ್ಟಕ್ಕೂ ಯಾವುದೇ ಸಂಬಂಧವಿಲ್ಲ. ಕೋಳಿಗೆ ಯಾವ ಆಹಾರವನ್ನು ತಿನ್ನಿಸಲಾಗಿದೆ ಎನ್ನುವುದನ್ನು ಮೊಟ್ಟೆಯ ಹಳದಿ ಭಾಗದ ಬಣ್ಣವು(ಗಾಢ ಅಥವಾ ತೆಳು) ಅವಲಂಬಿಸಿರುತ್ತದೆ,ಆದರೆ ಇದು ಅದರ ಪೌಷ್ಟಿಕಾಂಶ ವೌಲ್ಯಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡುವುದಿಲ್ಲ, ಆದರೆ ವಿಟಾಮಿನ್ ಎ ಮತ್ತು ಲುಟೀನ್ ಪ್ರಮಾಣದಲ್ಲಿ ಕೊಂಚ ವ್ಯತ್ಯಾಸವಾಗಬಹುದು. ಮೊಟ್ಟೆಯ ಬಣ್ಣ ಯಾವುದೇ ಆಗಿದ್ದರೂ ಅದರ ಹಳದಿ ಭಾಗವು ವಿಟಾಮಿನ್ಗಳು,ಖನಿಜಗಳು ಮತ್ತು ಕೊಬ್ಬಿನ ಉತ್ತಮ ಮೂಲವಾಗಿದೆ. ಅದರ ಬಿಳಿಯ ಭಾಗವು ಸಮೃದ್ಧ ರಿಬೋಫ್ಲಾವಿನ್ ಮತ್ತು ಪ್ರೋಟಿನ್ ಅನ್ನು ಒಳಗೊಂಡಿರುತ್ತದೆ.
► ತಾಜಾ ಮೊಟ್ಟೆಗಳು ಉತ್ತಮ
ತಾಜಾ ಮೊಟ್ಟೆಗಳನ್ನು ಫ್ರಿಝ್ನಲ್ಲಿ ಸೂಕ್ತ ರೀತಿಯಲ್ಲಿ ದಾಸ್ತಾನಿರಿಸಿದರೆ ಮೂರು ವಾರಗಳವರೆಗೂ ಅವುಗಳನ್ನು ಸೇವಿಸಬಹುದು. ಕೋಣೆಯ ತಾಪಮಾನದಲ್ಲಿ ಮೊಟ್ಟೆಗಳು ಬೇಗನೆ ಕೆಡುತ್ತವೆ,ಹೀಗಾಗಿ ಅವುಗಳನ್ನು ಹೆಚ್ಚು ಹೊತ್ತು ಹೊರಗಿರಿಸಬಾರದು.
► ಮೊಟ್ಟೆಯಲ್ಲಿನ ಕೊಬ್ಬಿನ ಅಂಶ
ಒಂದು ದೊಡ್ಡ ಮೊಟ್ಟೆಯು 1.5 ಗ್ರಾಂ ಸ್ಯಾಚುರೇಟೆಡ್ ಫ್ಯಾಟ್,1 ಗ್ರಾ ಪಾಲಿಅನ್ಸ್ಯಾಚುರೇಟೆಡ್ ಫ್ಯಾಟ್ ಮತ್ತು 1.8 ಗ್ರಾಂ ಮೊನೊಸ್ಯಾಚುರೇಟೆಡ್ ಫ್ಯಾಟ್ ಅನ್ನು ಒಳಗೊಂಡಿರುತ್ತದೆ. ಕೋಳಿಗಳಿಗೆ ಅಗಸೆ ಬೀಜಗಳಿರುವ ಆಹಾರವನ್ನು ತಿನ್ನಿಸುವುದರಿಂದ ಮೊಟ್ಟೆಯಲ್ಲಿ ಒಮೆಗಾ-3 ಫ್ಯಾಟಿ ಆ್ಯಸಿಡ್ಗಳೂ ಇರುತ್ತವೆ.