ಅಮಿತ್ ಶಾ ರಿಂದ ಬೆಳೆಗಾರರಿಗೆ ಅವಮಾನ: ಆರೋಪ

ಮೂಡಿಗೆರೆ,ಮೇ.02 : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ರೈತರ ಸಂಕಷ್ಟವನ್ನು ಆಲಿಸಲು ನಿರಾಕರಿಸಿ ಎಲ್ಲಾ ಬೆಳೆಗಾರರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಆರೋಪಿಸಿದ್ದಾರೆ.
ಹೇಳಿಕೆ ನೀಡಿರುವ ಅವರು, ಮೇ.1 ರಂದು ಮಂಗಳವಾರ ಮೂಡಿಗೆರೆಗೆ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲು ಆಗಮಿಸುವಾಗ ಎಲ್ಲಾ ಬೆಳೆಗಾರರೊಂದಿಗೆ ಸಂವಾದ ನಡೆಸುವುದಾಗಿ ಪೂರ್ವಭಾವಿಯಾಗಿ ಸಮಯ ನಿಗದಿಗೊಳಿಸಿದ್ದರು. ಹೀಗಾಗಿ ಬೆಳೆಗಾರರು ತಮ್ಮ ಕಾಫಿ ಹಾಗೂ ಮೆಣಸು ಉದ್ಯಮದ ಆರ್ಥಿಕ ಸಂಕಷ್ಟವನ್ನು ವಿವರಿಸಲು ಕಾಯ್ದಿದ್ದರು. ಆದರೆ ಅಮಿತ್ ಶಾ ಬೆಳೆಗಾರರೊಂದಿಗೆ ಮಾತನಾಡಲು ನಿರಾಕರಿಸಿ ಪಲಾಯನ ಮಾಡಿರುತ್ತಾರೆ. ಇದರಿಂದ ಮೂರು ಜಿಲ್ಲೆಗಳ ಲಕ್ಷಾಂತರ ಬೆಳೆಗಾರರು ಹಾಗೂ ಕಾಫಿ ಉದ್ಯಮವನ್ನೇ ನಂಬಿರುವ ಕಾರ್ಮಿಕರನ್ನು ಅವಮಾನ ಮಾಡಿದಂತಾಗಿದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಕೇಂದ್ರ ಸರ್ಕಾರಕ್ಕೆ ವಾರ್ಷಿಕ 4500ರಿಂದ 5000 ಕೋಟಿ ಆದಾಯ ನೀಡುವ ಬೆಳೆಗಾರರನ್ನು ನಿರ್ಲಕ್ಷಿಸಿರುವುದಕ್ಕೆ ಬೆಳೆಗಾರರೇ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದಿದ್ದಾರೆ.





