ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಕೆ
ಜೆಡಿಎಸ್‌ನ 7 ಬಂಡಾಯ ಶಾಸಕರ ಅನರ್ಹಗೊಳಿಸುವ ವಿಚಾರ

ಬೆಂಗಳೂರು, ಮೇ 2: ಜೆಡಿಎಸ್‌ನ 7 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ದೂರಿನ ಕುರಿತ ತೀರ್ಪನ್ನು ಮೇ 7ರೊಳಗೆ ಪ್ರಕಟಿಸುವಂತೆ ಸ್ಪೀಕರ್‌ಗೆ ನಿರ್ದೇಶಿಸಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಏಕಸದಸ್ಯ ಪೀಠದ ಆದೇಶ ರದ್ದುಕೋರಿ ಸ್ಪೀಕರ್ ಕಚೇರಿ ಕಾರ್ಯದರ್ಶಿ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜೆಡಿಎಸ್ ಬಂಡಾಯ ಶಾಸಕರು ಸಲ್ಲಿಸಿರುವ ಮೇಲ್ಮನವಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ರಜಾಕಾಲದ ಪೀಠ, ಕೆಲ ಸಮಯ ವಾದ-ಪ್ರತಿವಾದ ಆಲಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ವಿಚಾರಣೆ ವೇಳೆ, ಸ್ಪೀಕರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್, ಮೇ 7ರೊಳಗೆ ತೀರ್ಪು ಪ್ರಕಟಿಸುವಂತೆ ಸ್ಪೀಕರ್‌ಗೆ ನಿರ್ದೇಶಿಸಿರುವ ಏಕಸದಸ್ಯ ಪೀಠ, ತನ್ನ ವ್ಯಾಪ್ತಿ ಮೀರಿ ತೀರ್ಪು ನೀಡಿದೆ. ಸಾಂವಿಧಾನಿಕ ಹುದ್ದೆ ನಿರ್ವಹಿಸುವ ಸ್ಪೀಕರ್‌ಗೆ ಇಷ್ಟೇ ಅವಧಿಯಲ್ಲಿ ತೀರ್ಪು ಪ್ರಕಟಿಸಲು ನಿರ್ದೇಶಿಸಲು ಅಧಿಕಾರವಿಲ್ಲ. ಹೀಗಾಗಿ ಈ ಸಂಬಂಧ ಎ.24ರಂದು ಏಕಸದಸ್ಯ ಪೀಠ ನೀಡಿರುವ ತೀರ್ಪನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಪರ ಹಿರಿಯ ವಕೀಲ ಉದಯ ಹೊಳ್ಳ ವಾದಿಸಿ, ಪಕ್ಷದ ವಿಪ್ ಉಲ್ಲಂಸಿ ಮತ ಹಾಕಿದ್ದ ಏಳು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ದೂರನ್ನು ಸ್ಪೀಕರ್ ಎರಡು ವರ್ಷವಾದರೂ ಇತ್ಯರ್ಥಪಡಿಸಿರಲಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಮೇ 7ರೊಳಗೆ ದೂರಿನ ಕುರಿತು ಕಾಯ್ದಿರಿಸಿರುವ ತೀರ್ಪು ಪ್ರಕಟಿಸುವಂತೆ ತೀರ್ಪು ನೀಡಿದ್ದು, ಇದು ಸುಪ್ರೀಂಕೋರ್ಟ್‌ನ ತೀರ್ಪಿಗೆ ಅನುಗುಣವಾಗಿಯೇ ಇದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಬಂಡಾಯ ಶಾಸಕರ ಅನರ್ಹತೆ ಕೋರಿ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ಶ್ರವಣಬೆಳಗೊಳದ ಶಾಸಕ ಸಿ.ಎನ್.ಬಾಲಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಅವರಿದ್ದ ಏಕಸದಸ್ಯ ಪೀಠ, ಮೇ 12ರಂದು ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮೇ 7ರೊಳಗೆ ತೀರ್ಪು ಪ್ರಕಟಿಸುವಂತೆ ಸ್ಪೀಕರ್‌ಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಇದೀಗ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.







