ಶಾಸಕ ಜೆ.ಆರ್.ಲೋಬೊಗೆ ವಾಮಾಚಾರ: ಕಾಂಗ್ರೆಸ್ ಆರೋಪ

ಮಂಗಳೂರು, ಮೇ 3: ನಗರದ ಅತ್ತಾವರ ನಂದಿಗುಡ್ಡ ಹಿಂದೂ ರುದ್ರಭೂಮಿಯಲ್ಲಿ ಶಾಸಕ ಜೆ.ಆರ್.ಲೋಬೊಗೆ ವಾಮಾಚಾರಗೈಯಲಾಗಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.
ಸುಮಾರು 10 ದಿನಗಳ ಹಿಂದೆ ಇಲ್ಲಿ ಶಾಸಕ ಲೋಬೋಗೆ ವಾಮಾಚಾರ ಮಾಡಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡ ಬಳಿಕ ಕಾಂಗ್ರೆಸ್ಸಿಗರು ಇಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಗುರುವಾರ ಮಧ್ಯಾಹ್ನ ಇಲ್ಲಿ ವಾಮಾಚಾರದ ಕೆಲವು ಕುರುಹುಗಳು ಕಾಣಿಸಿಕೊಂಡೊಡನೆ ಕಾವಲುಗಾರರು ಮತ್ತು ಕೂಲಿಯಾಳುಗಳು ಕಾಂಗ್ರೆಸ್ಸಿಗರ ಗಮನ ಸೆಳೆದಿದ್ದರು. ಅದರಂತೆ ಕಾಂಗ್ರೆಸ್ ಕಾರ್ಯಕರ್ತರು ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ ಪ್ರೊ. ನರೇಂದ್ರ ನಾಯಕ್, ನನಗೆ ಇದರಲ್ಲೆಲ್ಲಾ ನಂಬಿಕೆ ಇಲ್ಲ. ಹಾಗಾಗಿ ನಾನು ಇಂತಹ ವಿಚಾರ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ವಾಮಚಾರದ್ದು ಎನ್ನಲಾದ ಸಾಮಗ್ರಿಗಳನ್ನು ತುಳಿಯುತ್ತೇನೆ. ರಾಜಕೀಯ ಕಾರಣಕ್ಕಾಗಿ ಇಲ್ಲಿ ವಾಮಚಾರ ಮಾಡಲಾಗಿದೆ ಎಂಬ ಮಾಹಿತಿ ಎ.23ರಂದು ನನಗೆ ಲಭಿಸಿತ್ತು. ಅದರಂತೆ ನಾನು ಇಲ್ಲಿಗೆ ಆಗಮಿಸಿ ಆ ಸಾಮಗ್ರಿಗಾಗಿ ಹುಡುಕಾಟ ನಡೆಸಿದ್ದೆ. ಆದರೆ ಸಿಕ್ಕಿರಲಿಲ್ಲ. ಇಂದು ವಾಮಾಚಾರ ನಡೆಸಿರುವುದರ ಕುರುಹು ಇದೆ ಎಂದು ತಿಳಿದೊಡನೆ ಮತ್ತೆ ಆಗಮಿಸಿ ಈ ಸಾಮಗ್ರಿಗಳಿಗೆ ತುಳಿದೆ. ಯಾಕೆಂದರೆ, ಇದೊಂದು ಮೂಢನಂಬಿಕೆ. ಇದನ್ನು ತುಳಿದರೆ ಏನೂ ಆಗುವುದಿಲ್ಲ ಎಂಬುದರ ಬಗ್ಗೆ ಜನರಲ್ಲಿ ಪ್ರಜ್ಞೆ ಹುಟ್ಟಿಸಬೇಕಿದೆ. ಇದನ್ನು ನಂಬಿ ಭಯಪಟ್ಟು ಪ್ರಾಣ ಕಳಕೊಳ್ಳಬೇಡಿ ಎಂಬ ಸಂದೇಶ ರವಾನಿಸುವ ಸಲುವಾಗಿ ಹೀಗೆ ಮಾಡಿದೆ. ಅಂದಹಾಗೆ, ಇದು ಭಾರತೀಯ ವಾಮಾಚಾರದ ಸಾಮಗ್ರಿಗಳಲ್ಲ. ಆಫ್ರಿಕನ್ ಮೂಲದ ಸಾಮಗ್ರಿಗಳಿವು. ಮೌಢ್ಯಕ್ಕೆ ಸಂಬಂಧಿಸಿದ ಈ ಸಾಮಗ್ರಿಗಳು ವಿದೇಶದಿಂದಲೂ ಆಮದಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಯಾರೂ ಇದನ್ನು ನಂಬಬೇಡಿ’ ಎಂದಿದ್ದಾರೆ.
ಕಾರ್ಪೊರೇಟರ್ ಹಾಗೂ ಕಾಂಗ್ರೆಸ್ ಮುಖಂಡ ಪ್ರಕಾಶ್ ಮಾತನಾಡಿ ‘ಶಾಸಕ ಜೆ.ಆರ್.ಲೋಬೊರ ಜನಪ್ರಿಯತೆಯನ್ನು ಸಹಿಸದವರು ಈ ಕೆಲಸ ಮಾಡಿದ್ದಾರೆ. ಈ ರುದ್ರಭೂಮಿಯ ಅಭಿವೃದ್ಧಿಗಾಗಿ ಶಾಸಕರು ತುಂಬಾ ಶ್ರಮಿಸಿದ್ದಾರೆ. ಇದು ವಿಪಕ್ಷಗಳ ಹತಾಶೆಗೆ ಕಾರಣವಾಗಿದೆ. ಈ ಹಿಂದೆಯೇ ನಾವು ಈ ಸಂಗತಿಯನ್ನು ಶಾಸಕರ ಗಮನ ಸೆಳೆದಿದ್ದೆವು. ದೇವರು ಮತ್ತು ಜನರ ಮೇಲೆ ವಿಶ್ವಾಸವಿರುವ ನನಗೆ ಇದರಲ್ಲೆಲ್ಲಾ ನಂಬಿಕೆ ಇಲ್ಲ ಎಂದು ತಿಳಿಸಿದ್ದಾರೆ. ವಿಪಕ್ಷಗಳು ಏನೇ ತಂತ್ರಗಾರಿಕೆ ಮಾಡಿದರೂ ಪ್ರಯೋಜನವಾಗದು’ ಎಂದು ತಿಳಿಸಿದ್ದಾರೆ.







