ಅರ್ಜುನ ಪ್ರಶಸ್ತಿಗೆ ಮನ್‌ಪ್ರೀತ್ ಸಿಂಗ್ ಹೆಸರು ಶಿಫಾರಸು

ಹೊಸದಿಲ್ಲಿ, ಮೇ 3: ಕಳೆದ ತಿಂಗಳು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಹಾಗೂ ಇತರ ಮೂವರು ಆಟಗಾರರನ್ನು ಈ ವರ್ಷದ ಅರ್ಜುನ ಪ್ರಶಸ್ತಿಗೆ ರಾಷ್ಟ್ರೀಯ ಹಾಕಿ ಫೆಡರೇಶನ್ ಶಿಫಾರಸು ಮಾಡಿದೆ.
ಇನ್ನೋರ್ವ ಹಿರಿಯ ಮಿಡ್ ಫೀಲ್ಡರ್ ಧರ್ಮವೀರ್ ಸಿಂಗ್ ಹಾಗೂ ಭಾರತ ಮಹಿಳಾ ತಂಡದ ಗೋಲ್‌ಕೀಪರ್ ಸವಿತಾ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಸಂಗೈ ಚಾನು ಹಾಗೂ ಭಾರತದ ಮಾಜಿ ನಾಯಕ ಭರತ್ ಚೆಟ್ರಿ ಹೆಸರನ್ನು ಜೀವಮಾನ ಸಾಧನೆಗೆ ನೀಡುವ ಧ್ಯಾನ್‌ಚಂದ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಹಾಕಿ ಇಂಡಿಯಾವು ಕೋಚ್ ಬಿ.ಎಸ್.ಚೌಹಾಣ್‌ರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಕಳೆದ ವರ್ಷ ಪಿ.ಆರ್. ಶ್ರೀಜೇಶ್ ಅನುಪಸ್ಥಿತಿಯಲ್ಲಿ ಭಾರತೀಯ ಹಾಕಿ ತಂಡದ ನಾಯಕತ್ವವಹಿಸಿಕೊಂಡಿದ್ದ ಮನ್‌ಪ್ರೀತ್ ಭಾರತ ತಂಡ ಮಲೇಷ್ಯಾವನ್ನು ಮಣಿಸಿ ಏಷ್ಯಾಕಪ್ ಜಯಿಸಲು ನಾಯಕತ್ವವಹಿಸಿದ್ದರು.
ಕಳೆದ ವರ್ಷ ವರ್ಲ್ಡ್ ಲೀಗ್ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸಿದ ಭಾರತ ತಂಡದ ನಾಯಕನಾಗಿದ್ದ ಮನ್‌ಪ್ರೀತ್ 200ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. 2012 ಹಾಗೂ 2016ರ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸಿರುವ ತಂಡದ ಸದಸ್ಯರಾಗಿದ್ದರು.
ಸವಿತಾ ಕಳೆದ ವರ್ಷ ಭಾರತ ಐತಿಹಾಸಿಕ ಏಷ್ಯಾಕಪ್ ಜಯಿಸಲು ಕಾರಣರಾಗಿದ್ದರು. ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲನ್ನು ತಡೆದ ಸವಿತಾ ಚೀನಾ ವಿರುದ್ಧ ಫೈನಲ್ ಪಂದ್ಯ ಜಯಿಸಲು ನೆರವಾಗಿದ್ದರು. ಭಾರತ 13 ವರ್ಷಗಳ ಬಳಿಕ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸವಿತಾರ ಪ್ರದರ್ಶನ ನಿರ್ಣಾಯಕವಾಗಿತ್ತು. 36 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ತಂಡದಲ್ಲೂ ಸವಿತಾ ಆಡಿದ್ದಾರೆ. 2016ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಜಯಿಸಿರುವ ತಂಡದ ಸದಸ್ಯೆಯಾಗಿದ್ದಾರೆ.
ಧರ್ಮವೀರ್ 2014ರಲ್ಲಿ ಕೊರಿಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ತಂಡದ ಭಾಗವಾಗಿದ್ದರು.2012ರ ಲಂಡನ್ ಒಲಿಂಪಿಕ್ಸ್ ಹಾಗೂ 2014ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.







