ಸ್ವೀಪ್ ಕಮಟಿಯಿಂದ ಮತದಾನ ಜಾಗೃತಿಗೆ ಬೈಕ್ ರ್ಯಾಲಿ

ತುಮಕೂರು,ಮೇ.3: ಮೇ.12ರಂದು ನಡೆಯುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಬಗ್ಗೆ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಹಾಗೂ ಸ್ವೀಪ್ ಸಮಿತಿ ವತಿಯಿಂದ ಸಿದ್ದಗಂಗಾ ಮಠದಿಂದ ಬೈಕ್ ರ್ಯಾಲಿಯನ್ನು ನಡೆಸಲಾಯಿತು.
ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ.ನಾಗಣ್ಣ, ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಳ್ಳಿ ಹಳ್ಳಿಗಳ ಮೂಲಕ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಮೇ.12ರಂದು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರು ಮತದಾನ ಮಾಡುವಂತೆ ಅರಿವು ಮೂಡಿಸಿ ಶೇ.100ರಷ್ಟು ಮತದಾನದ ಪ್ರಗತಿಯನ್ನು ಸಾಧಿಸಬೇಕಾಗಿದೆ.
ಗ್ರಾಮಾಂತರ ಪ್ರದೇಶದ ಪ್ರತಿಯೊಬ್ಬ ಮತದಾರನು ಮತದಾನ ಮಾಡುವಂತೆ ತುಮಕೂರು ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಮೂಲಕ ಬೈಕ್‍ನಲ್ಲಿ ತೆರಳಿ ಅರಿವು ಮೂಡಿಸಲಾಗುವುದು.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಮತದಾನದ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿ ಸಮೃದ್ಧ ಭಾರತವನ್ನು ಕಟ್ಟಬೇಕಾಗಿದೆ.ಈ ನಿಟ್ಟಿನಲ್ಲಿ ಎಲ್ಲ ಮತದಾರರು ಮತದಾನವನ್ನು ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಅವರು ಹೇಳಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳಲ್ಲಿ ಮಹಿಳೆಯರಿಗೆ, ವಿಕಲಚೇತನರಿಗೆ, ಹಿರಿಯನಾಗರಿಕರಿಗೆ ಆದ್ಯತೆ ಮೇರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.ಈ ಬಾರಿ ಚುನಾವಣಾ ಆಯೋಗ ಹೊಸದಾಗಿ ವಿವಿಪ್ಯಾಟ್ (ಮತಖಾತ್ರಿಯಂತ್ರ)ಅನ್ನು ಬಳಸುತ್ತಿದ್ದು,ಇದರಿಂದಾಗಿ ನಾವು ಯಾರಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ರ್ಯಾಲಿಯಲ್ಲಿ ಡಿವೈಎಸ್ಪಿ ನಾಗಾರಾಜ್ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸಿದ್ದಗಂಗಾ ಮಠದಿಂದ ನೂರಾರು ಬೈಕ್‍ಗಳ ಮೂಲಕ ಹೊರಟ ರ್ಯಾಲಿ ಬೆಳಗುಂಬ,ಅಂತರಸನಹಳ್ಳಿ,ಯಲ್ಲಾಪುರ,ಅರಕೆರೆ,ಸಿಟಿಕೆರೆ, ದೇವಲಾಪುರ, ಕೆಸ್ತೂರು,ಊರುಕೆರೆ ಮೂಲಕ ತಾಲ್ಲೂಕು ಪಂಚಾಯತಿ ತುಮಕೂರು ಇಲ್ಲಿ ಮುಕ್ತಾಯಗೊಂಡಿತು.







