ಚಾಮರಾಜನಗರ: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ, ಗಿಡಗಳ ವಿತರಣೆ

ಚಾಮರಾಜನಗರ,ಮೇ.3: ಎಲ್ಲ ಮದುವೆಗಿಂತ ಭಿನ್ನವಾಗಿತ್ತು ಈ ಮದುವೆ.. ಮದುವೆ ಮನೆಗೆ ಬಂದವರಿಗೆ ಮತದಾನ ಪ್ರತಿಜ್ಞಾ ಭೋದನೆ.. ಗಿಡಗಳ ವಿತರಣೆ.. ಆದರ್ಶ ವ್ಯಕ್ತಿಗಳ ಪುಸ್ತಕ ಪ್ರದರ್ಶನ
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬುಧವಾರ ನಡೆದ ಮದುವೆಗೆ ಬಂದವರಿಗೆ ಮತದಾನದ ಅರಿವು ಹಾಗೂ ಪರಿಸರ ಸಂರಕ್ಷಣೆಗಾಗಿ ಗಿಡಗಳ ವಿತರಣೆ ಮತ್ತು ಉಜ್ವಲ ಜೀವನಕ್ಕಾಗಿ ಆದರ್ಶ ವ್ಯಕ್ತಿಗಳ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಿತು.
ಚಾಮರಾಜನಗರದ ನಂದಿ ಭವನದಲ್ಲಿ ಹರದನಹಳ್ಳಿ ಗಾಮದ ಮಧುಸೂಧನ್‍ರವರ ವಿವಾಹ ನಡೆಯಿತು. ಈ ವಿವಾಹದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ನೆರವಿನೊಂದಿಗೆ ಕಲ್ಯಾಣ ಮಂಟಪದಲ್ಲೇ ಮತದಾನದ ಜಾಗೃತಿ ಮತ್ತು ಅರಿವು ಮಾಡುವಂತಹ ಮಹತ್ವ ಕಾರ್ಯ ನಡೆದಿದ್ದು ಇಡೀ ಜಿಲ್ಲಾಡಳಿತ ಅಭಿನಂದಿಸಿದೆ.
ವಧುವರರನ್ನು ಆಶೀರ್ವಧಿಸಲು ಬರುವ ನೂರಾರು ಮಂದಿ ಬಂಧು ಬಳಗದವರಿಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ರಮೇಶ್ ನೇತೃತ್ವದಲ್ಲಿ ನವದಂಪತಿಗಳು ಕಡ್ಡಾಯ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಲ್ಲದೆ ಹಣಕ್ಕಾಗಿ ಮತಗಳನ್ನು ಮಾರಾಟ ಮಾಡಿಕೊಳ್ಳದಿರಲು ತೀರ್ಮಾನಿಸಿ ಮೇ.12 ರಂದು ನಡೆಯುವ ಚುನಾವಣೆಯಲ್ಲಿ ಅರ್ಹ ವ್ಯಕ್ತಿಗೆ ಮತ ಚಲಾವಣೆ ಮಾಡುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು.
ಸಾರ್ವಜನಿಕರಿಗೆ ಅಧಿಕಾರಿಗಳ ಮಟ್ಟದಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಮದ್ವೆ ಮನೆಯಲ್ಲೂ ಸಹ ಬರುವ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸಿದ್ದು ವಿಶಿಷ್ಟವಾಗಿದ್ದು, ಇಂತಹ ಕಾರ್ಯಗಳು ಜಿಲ್ಲೆಯ ಬಹುತೇಕ ಕಡೆ ನಡೆದರೆ ಉತ್ತಮವಾಗಿರುತ್ತದೆ ಹಾಗೂ ಜನರಲ್ಲಿ ಮತದಾನದ ಮಹತ್ವ ಏನೆಂದು ಗೊತ್ತಾಗಿ, ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗಳಿಗೆ ಮತಚಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ರಮೇಶ್ ಹೇಳಿದರು.
ಮತದಾನದ ಬಗ್ಗೆ ದಿನದಿಂದ ದಿನಕ್ಕೆ ಜಾಗೃತಿ ಮೂಡಿಸುವ ಕಾರ್ಯಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. ಇಂತಹ ಮತದಾನದ ಜಾಗೃತಿ ಕಾರ್ಯಗಳು ಜನ ದಟ್ಟಣೆ ಸೇರುವ ಖಾಸಗಿ ಕಾರ್ಯಕ್ರಮದಲ್ಲೂ ಸಾರ್ವಜನಿಕರು ಮುಂದಾದರೆ ಚುನಾವಣೆ ಸಮಯದಲ್ಲಿ ಉತ್ತಮವಾದ ಮತಚಲಾವಣೆಯಾಗಲಿದೆ. ಇಂತಹ ಕಾರ್ಯ ಹೆಚ್ಚಾಗಿ ನಡೆಯಲಿ ಎನ್ನುವುದೆ ನಮ್ಮ ಆಶಯ.







