ಮೋದಿಗೆ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ

ಬೆಂಗಳೂರು, ಮೇ 3: ಯೋಗ್ಯರು ಕೇಳಿದ ಪ್ರಶ್ನೆಗಳಿಗೆ ಮಾತ್ರ ಪ್ರಧಾನಿ ಮೋದಿ ಉತ್ತರ ನೀಡುತ್ತಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿದ್ದಾರೆ.
ಗುರುವಾರ ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಪರ ಮತ ಯಾಚನೆ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ 5 ಪ್ರಶ್ನೆಗಳನ್ನ ಕೇಳಿದ್ದಾರೆ. ಇವುಗಳಿಗೆ ಉತ್ತರ ನೀಡಿ ಎಂದು ಅನೇಕ ಬಾರಿ ಹೇಳುತ್ತಲೇ ಇದ್ದಾರೆ. ಆದರೆ, ಮೋದಿ ಕೇವಲ ಯೋಗ್ಯರ-ಯೋಗ್ಯ ಪ್ರಶ್ನೆಗಳಿಗಷ್ಟೇ ಉತ್ತರ ನೀಡುವುದು. ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ ಆಪ್ತನೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿ ಹೆಬ್ಬಾಳದಲ್ಲಿ ಮತದಾರರನ್ನು ಕೊಂಡುಕೊಳ್ಳುತ್ತೇನೆಂದು ಅಹಂಕಾರದಿಂದ ಬೀಗುತ್ತಿದ್ದಾರೆ. ಆದರೆ, ಹೆಬ್ಬಾಳದ ಮತದಾರರು ಪ್ರಜ್ಞಾವಂತರಾಗಿದ್ದು ಹಣದ ಮದದಲ್ಲಿರುವ ಅಭ್ಯರ್ಥಿಯನ್ನು ಸೋಲಿಸಿ, ಅಭಿವೃದ್ದಿ ಪರ ಅಭ್ಯರ್ಥಿ ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಲಿದ್ದಾರೆ ಎಂದರು.
ಪ್ರಚಾರದಲ್ಲಿ ಡಿವಿಎಸ್ ಪತ್ನಿ ಡಾಟಿ ಸದಾನಂದಗೌಡ ಹಾಗೂ ಹೆಬ್ಬಾಳ ಅಭ್ಯರ್ಥಿ ನಾರಾಯಣಸ್ವಾಮಿ ಪತ್ನಿ ಉಷಾ ನಂದಿನಿ ಮಹಿಳೆಯರೊಂದಿಗೆ ಪಾದಯಾತ್ರೆ ಮೂಲಕ ಮತಯಾಚಿಸಿದರು. ಈ ವೇಳೆ ಮಾತನಾಡಿದ ಡಾಟಿ, ರಾಜ್ಯದಲ್ಲಿ ಬಿಜೆಪಿ ಅಲೆಯಿದ್ದು, ಹೆಬ್ಬಾಳದಲ್ಲಿ ನಾರಾಯಣಸ್ವಾಮಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ಇವುಗಳ ಆಧಾರದ ಮೇಲೆ ನಾರಾಯಣಸ್ವಾಮಿ ಅವರು ಇನ್ನೊಮ್ಮೆ ಗೆಲ್ಲಲಿದ್ದಾರೆ ಎಂದರು.







