ಮದುವೆಯಾಗುವುದಾಗಿ ನಂಬಿಸಿ ವಂಚನೆ: ಅಪರಾಧಿಗೆ ಶಿಕ್ಷೆ

ಮಂಗಳೂರು, ಮೇ 3: ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ವಂಚಿಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನೋರ್ವನಿಗೆ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಬೆಳ್ತಂಗಡಿ ಗ್ರಾಮದ ಕೊಯ್ಯೂರು ಹಡೀಲು ನಿವಾಸಿ ಸಂತೋಷ್ (25) ಅಪರಾಧಿ.
ಈತ ಸ್ಪಂದನ ಸಾಂತ್ವನ ಕೇಂದ್ರದಲ್ಲಿ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ಅವರು ಅಪರಾಧಿ ಸಂತೋಷ್‌ಗೆ 8 ತಿಂಗಳು ಜೈಲು ಶಿಕ್ಷೆ, 20 ಸಾವಿರ ರೂ. ದಂಡ ಹಾಗೂ ಸಂತ್ರಸ್ತೆಗೆ ಹೆಚ್ಚುವರಿಯಾಗಿ 90 ಸಾವಿರ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಮದುವೆ ಕಾರ್ಯಕ್ರಮವೊಂದರಲ್ಲಿ ಸಂತೋಷನಿಗೆ ಮೂಡಿಗೆರೆಯ ಯುವತಿಯೊಬ್ಬಳ ಪರಿಚಯವಾಗಿತ್ತು. ಬಳಿಕ ಮೊಬೈಲ್‌ನಲ್ಲಿ ಸಂಪರ್ಕದಲ್ಲಿದ್ದರು. 2013 ಜುಲೈ 27ರಂದು ಮನೆಯವರಿಗೆ ಪರಿಚಯ ಮಾಡಿಸುವುದಾಗಿ ಹೇಳಿ ಯುವತಿಯನ್ನು ಬೆಳ್ತಂಗಡಿಗೆ ಬರಲು ಹೇಳಿದ್ದ. ಅದರಂತೆ ಯುವತಿ ಬೆಳ್ತಂಗಡಿಗೆ ಬಂದಿದ್ದಳು. ಸಂತೋಷ್ ಸಾಂತ್ವನ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ. ಸಂಜೆ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದ. ಇನ್ನು ಬಸ್ ವ್ಯವಸ್ಥೆ ಇಲ್ಲ. ನಾಳೆ ಊರಿಗೆ ಹೋಗೋಣ ಎಂದು ಸುಳ್ಳು ಹೇಳಿ ಆಕೆಯನ್ನು ರಾತ್ರಿ 9 ಗಂಟೆಗೆ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಿದ್ದ. ಅಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಮರುದಿನ ಆಕೆಯನ್ನು ಮನೆಗೆ ಕರೆದೊಯ್ಯಲಿಲ್ಲ. ಹಾಗಾಗಿ ಮೂಡಿಗೆರೆಗೆ ಹಿಂತಿರುಗಿದ್ದಳು. 2014 ಜ. 11ರಂದು ಸಂತೋಷ್ ಮತ್ತೆ ಆಕೆಯನ್ನು ಬೆಳ್ತಂಗಡಿಗೆ ಕರೆಸಿ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.
ಕೆಲವು ಸಮಯದ ಬಳಿಕ ಮದುವೆಯಾಗುವಂತೆ ಆಕೆ ಒತ್ತಾಯ ಮಾಡಿದಾಗ ಆತ ನಿರಾಕರಿಸಿದ್ದ. ಅಲ್ಲದೆ, ಕೊಲೆ ಮಾಡಿ ಚಾರ್ಮಾಡಿ ಘಾಟಿಯಲ್ಲಿ ಬಿಸಾಡುವುದಾಗಿ ಬೆದರಿಕೆ ಹಾಕಿದ್ದ. ಸಂತೋಷ್‌ನ ವಂಚನೆಯನ್ನು ಅರಿತ ಯುವತಿ 2014 ಮಾರ್ಚ್ 29ರಂದು ಅದೇ ಸ್ಪಂದನ ಸಾಂತ್ವನ ಕೇಂದ್ರದ ಮುಖ್ಯಸ್ಥರಿಗೆ ದೂರು ನೀಡಿದ್ದಳು. ಅಲ್ಲಿ ಕೌನ್ಸಿಲಿಂಗ್ ನಡೆಸಿ ಮದುವೆಗೆ ಒಪ್ಪಿಸಿದ್ದರು. ಆದರೆ ಸಂತೋಷ್ ಮದುವೆಗೆ ಹಿಂಜರಿದಿದ್ದ. 2014 ಜುಲೈ 13ರಂದು ಯುವತಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಳು. ಠಾಣೆಯಲ್ಲಿ ಮಾತುಕತೆ ನಡೆಸಿ ಪೊಲೀಸರು ಮದುವೆಯಾಗುವಂತೆ ಹೇಳಿದ್ದರು. ಇದಕ್ಕೆ ಒಪ್ಪಿದ ಸಂತೋಷ್ ಜುಲೈ 13ರಂದು ನಿಶ್ಚಿತಾರ್ಥ ನಡೆಸಿ ಮದುವೆಯಾಗುವುದಾಗಿ ಬರೆದು ಕೊಟ್ಟಿದ್ದ. ಬಳಿಕ ಅಣ್ಣ ವಿದೇಶದಲ್ಲಿದ್ದು, ಆತ ಬಂದ ಬಳಿಕ ವಿವಾಹವಾಗುವುದಾಗಿ ಹೇಳಿದ್ದ. ಯುವತಿಯು 2015 ಡಿ.29ರಂದು ಬೆಳ್ತಂಗಡಿ ಠಾಣೆಯಲ್ಲಿ ಸಂತೋಷ್ ವಿರುದ್ಧ ಅತ್ಯಾಚಾರ, ವಂಚನೆ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾಳೆ. ಮರುದಿನವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಅಂದಿನ ಇನ್‌ಸ್ಪೆಕ್ಟರ್ ಬಿ.ಲಿಂಗಪ್ಪ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಂಚನೆ (ಐಪಿಸಿ ಸೆಕ್ಷನ್ 417) ಪ್ರಕರಣದಲ್ಲಿ 4 ತಿಂಗಳು ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ಜೀವ ಬೆದರಿಕೆ (ಐಪಿಸಿ ಸೆಕ್ಷನ್ 506) ಆರೋಪದಲ್ಲಿ 4 ತಿಂಗಳು ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 15 ಸಾವಿರ ರೂ. ಹಾಗೂ ಹೆಚ್ಚುವರಿಯಾಗಿ 90 ಸಾವಿರ ರೂ. ಸಂತ್ರಸ್ತೆಗೆ ಪರಿಹಾರ ನೀಡಬೇಕು. ತಪ್ಪಿದರೆ 2 ತಿಂಗಳು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣದಲ್ಲಿ ಒಟ್ಟು 13 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. 21 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ಸರಕಾರದ ಪರ ವಾದಿಸಿದ್ದರು.







