ಬೆಳ್ಳಿಪ್ಪಾಡಿ ಸಂಪ್ರದಾಯದಂತೆ ನೆರವೇರಿದ ಡಾ.ಸತೀಶ್ ರೈ ಅಂತ್ಯಕ್ರಿಯೆ

ಮೈಸೂರು,ಮೇ.3: ಬಡವರ ವೈದ್ಯರೆಂದೇ ಖ್ಯಾತರಾಗಿ ನಿನ್ನೆ ನಿಧನರಾಗಿದ್ದ ಬಿಳ್ಳಿಪ್ಪಾಡಿ ಡಾ.ಸತೀಶ್ ರೈ ಅವರ ಅಂತ್ಯಕ್ರಿಯೇ ಗುರುವಾರ ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನೆರವೇರಿತು.
ಬೆಂಗಳೂರಿನಲ್ಲಿ ನಿಧನರಾಗಿದ್ದ ಅವರ ಪಾರ್ಥೀವ ಶರೀರವನ್ನು ಬುಧವಾರ ರಾತ್ರಿಯೇ ಮೈಸೂರಿಗೆ ತರಲಾಗಿತ್ತು. ಇಂದು ಬೆಳಿಗ್ಗೆಯಿಂದ ಮೃತರ ಸಿದ್ದಾರ್ಥ ಬಡವಾಣೆಯ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಬೆಳ್ಳಿಪ್ಪಾಡಿ ಸಂಪ್ರದಾಯದಂತೆ ಅಂತ್ಯಕ್ರಿಯೆ: ಡಾ.ಸತೀಶ್ ರೈ ಅವರ ಅಂತಿಮ ವಿಧಿವಿಧಾನವನ್ನು ಅವರ ಪುತ್ರ ದಶರಥ ರೈ ಬೆಳ್ಳಿಪ್ಪಾಡಿ ಕುಟುಂಬದ ಸಂಪ್ರದಾಯದಂತೆ ನೆರವೇರಿಸಿದರು. ನಂತರ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಪಂಚಭೂತಗಳ ನಡುವೆ ಅಂತ್ಯಕ್ರಿಯೆ ನಡೆಸಲಾಯಿತು.
ಮಂಗಳೂರಿನಿಂದ ಬಂದಿದ್ದ ಮೃತರ ಸಂಬಂಧಿಕರು ಮತ್ತು ಅಭಿಮಾನಿಗಳು ಸತೀಶ್ ರೈ ಅವರ ನೆನಪುಗಳನ್ನು ನೆನೆದು ದುಖಿ:ತರಾದರು.
ಹರಿದುಬಂದ ಜನಸಾಗರ: ತಮ್ಮ ಡಾಕ್ಟರ್ ನಿಧನರಾದರು ಎಂಬ ಸುದ್ದಿ ತಿಳಿಯುತ್ತಲೇ ಮೈಸೂರು ನಗರ ಸೇರಿದಂತೆ ಸುತ್ತಮುತ್ತಲ ಸಹಸ್ರಾರು ಮಂದಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನ ಪಡೆದ ಗಣ್ಯರು: ಸಚಿವ ತನ್ವೀರ್ ಸೇಠ್, ಶಾಸಕ ವಾಸು, ಸಂಸದ ಪ್ರತಾಪ್ ಸಿಂಹ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೌಖತ್ ಅಲಿಖಾನ್, ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣೇಶ್ವರ ರಾವ್, ನಿವೃತ್ತ ಎಸ್‍ಪಿ ಸುರೇಶ್, ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವರು ಮೃತರ ಅಂತಿಮ ದರ್ಶನ ಪಡೆದರು.







