ಸರಕಾರಿ ಅಧಿಕಾರಿಯನ್ನು ಹತ್ಯೆ ಮಾಡಿದ ಆರೋಪಿಯ ಬಂಧನ

ಹೊಸದಿಲ್ಲಿ, ಮೇ.3: ಸರಕಾರಿ ಅಧಿಕಾರಿಯ ಹತ್ಯಾ ಆರೋಪಿ ಕಸೌಲಿ ಮೂಲದ ಹೊಟೇಲ್ ಮಾಲಕ ವಿಜಯ್ ಸಿಂಗ್ ಎಂಬಾತನನ್ನು ಗುರುವಾರ ಪೊಲೀಸರು ಉತ್ತರ ಪ್ರದೇಶದ ಮಥುರಾದಲ್ಲಿ ಬಂಧಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶದಂತೆ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಸಹಾಯಕ ಪಟ್ಟಣ ಯೋಜಕರಾದ ಶೈಲ್ ಬಾಲಾ ಶರ್ಮಾ ಎಂಬ ಸರಕಾರಿ ಅಧಿಕಾರಿ ತನ್ನ ತಂಡದ ಜೊತೆ ಆರೋಪಿಯ ಜಾಗಕ್ಕೆ ತೆರಳಿದಾಗ ಸಿಂಗ್ ಆಕೆಯ ಮೇಲೆ ಗುಂಡು ಹಾರಿಸಿದ್ದ ಎಂದು ಆರೋಪಿಸಲಾಗಿದೆ. ಮುಖ ಮತ್ತು ಬೆನ್ನಿಗೆ ಗುಂಡೇಟು ತಗುಲಿ 51ರ ಹರೆಯದ ಶೈಲ್ ಸ್ಥಳದಲ್ಲೇ ಅಸುನೀಗಿದ್ದರು. ಸಾರ್ವಜನಿಕ ಕಲ್ಯಾಣ ಇಲಾಖೆಯ ಸಿಬ್ಬಂದಿ ಗುಲಾಬ್ ಸಿಂಗ್ ಈ ಘಟನೆಯಲ್ಲಿ ಗಾಯಗೊಂಡಿದ್ದರು.
ಎಪ್ರಿಲ್ 17ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದಲ್ಲಿ ತಮ್ಮ ಜಾಗಗಳಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಹೊಟೇಲ್ ಉದ್ಯಮಿಗಳಿಗೆ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು 15 ದಿನಗಳ ಗಡುವು ನೀಡಿತ್ತು ಜೊತೆಗೆ 15 ಲಕ್ಷ ರೂ. ದಂಡ ಪಾವತಿಸುವಂತೆಯೂ ಸೂಚಿಸಿತ್ತು.





