ಭರತ್ ಶೆಟ್ಟಿ ಆಸ್ಪತ್ರೆ, ಶಾಲೆಗಳ ನಿರ್ಮಾಣದ ಬಗ್ಗೆ ಮಾತನಾಡುತ್ತಿರುವುದು ದೊಡ್ಡ ತಮಾಷೆ: ಮುನೀರ್ ಕಾಟಿಪಳ್ಳ

ಮಂಗಳೂರು, ಮೇ 3: ಭರತ್ ಶೆಟ್ಟಿ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆಗಳ ನಿರ್ಮಾಣದ ಬಗ್ಗೆ ಮಾತನಾಡುತ್ತಿರುವುದು ದೊಡ್ಡ ತಮಾಷೆಯಂತೆ ಕಾಣುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಅವರು ಇಂದು ನೀರುಮಾರ್ಗದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
“ಬಿಜೆಪಿ ಅಧಿಕಾರವಧಿಯಲ್ಲಿ ವೆನ್ಲಾಕ್ ಆಸ್ಪತ್ರೆಯನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರ ಮಾಡುವ ಪ್ರಸ್ತಾಪ ಆರಂಭಗೊಂಡಿತ್ತು. ಜಿಲ್ಲೆಯಲ್ಲಿ ರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಇಲ್ಲದಂತಾಗಿದ್ದೇ ಬಿಜೆಪಿ ಆಡಳಿತಾವಧಿಯಲ್ಲಿ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಸತತ ವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಕಡೆಗಣಿಸುತ್ತ ಬಂದಿವೆ. ಖಾಸಗಿ ಆಸ್ಪತ್ರೆಗಳೆಂಬ ವ್ಯಾಪಾರಿ ಕೇಂದ್ರಗಳ ಪರ ನಿಂತಿವೆ. ಡಾ ಭರತ್ ಶೆಟ್ಟಿಯವರಂತೂ ಎ ಜೆ ಮತ್ತು ಯನೆಪೊಯದಂತಹ ಖಾಸಗಿ ಮೆಡಿಕಲ್ ಕಾಲೇಜು ಮತ್ತು ಖಾಸಗಿ ಶ್ರೀಮಂತ ವಿದ್ಯಾಸಂಸ್ಥೆಗಳ ಆಡಳಿತದ ಪ್ರತಿನಿಧಿ ಯಾಗಿದ್ದಾರೆ. ಅಂಥವರು ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳ ನಿರ್ಮಾಣ ಮಾಡುವುದು ಕನಸಿನ ಮಾತೇ ಸರಿ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಈಗ ಚುನಾವಣೆಯ ಸಂದರ್ಭದಲ್ಲಿ, ಸಿಪಿಎಂ ಎತ್ತುತ್ತಿರುವ ಇಂಥ ಗಂಭೀರ ಪ್ರಶ್ನೆಗಳಿಗೆ ಜನ ಕಿವಿಗೊಡುತ್ತಿರುವುದರಿಂದ, ಸರ್ಕಾರಿ ಆಸ್ಪತ್ರೆ, ಶಾಲೆ ಮೊದಲಾದವುಗಳ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಅವರಿಗೆ ಉಂಟಾಗಿದೆ. ಇದು ಕೇವಲ ಕಾಟಾಚಾರದ ಚುನಾವಣಾ ಭಾಷಣಗಳು ಮಾತ್ರ. ಇವರು ಯಾವತ್ತಿದ್ದರೂ ಖಾಸಗಿ ಆಸ್ಪತ್ರೆ, ಖಾಸಗಿ ಶಾಲೆಗಳ ಹಿತಾಸಕ್ತಿಯನ್ನು ಎತ್ತಿ ಹಿಡಿಯುವಂಥವರು. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಉಳ್ಳವರ ಹಿತಾಸಕ್ತಿ ರಕ್ಷಿಸುವ ಹುನ್ನಾರಗಳನ್ನು ಜನರು ಸರಿಯಾಗಿ ಅರ್ಥ ಮಾಡಿಕೊಂಡು ಸರಿಯಾದ ಆಯ್ಕೆಯ ಮೂಲಕ ತಕ್ಕ ಉತ್ತರ ನೀಡಬೇಕು” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ರೈತ ನಾಯಕ ಗಂಗಯ್ಯ ಅಮೀನ್ ವಹಿಸಿದ್ದರು. ಬಿಕೆ ಇಮ್ತಿಯಾಝ್, ಆನಂದ ಅಮೀನ್ , ಎನ್ ಇ ಮುಹಮ್ಮದ್, ಮನೋಜ್ ವಾಮಂಜೂರು, ಪೃಥ್ವಿ ಎಂಜಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







