ಛತ್ತೀಸ್ಗಢ: ನಕ್ಸಲ್ ಮುಖಂಡ ಎನ್ಕೌಂಟರ್ಗೆ ಬಲಿ

ಸಾಂದರ್ಭಿಕ ಚಿತ್ರ
ರಾಯ್ಪುರ, ಮೇ 3: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್ಕೌಂಟರ್ಗೆ ನಕ್ಸಲ್ ಮುಖಂಡನೋರ್ವ ಬಲಿಯಾಗಿದ್ದಾನೆ. ಈತನ ತಲೆಗೆ 5 ಲಕ್ಷ ರೂ. ಪುರಸ್ಕಾರ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ನಕ್ಸಲ್ ಮುಖಂಡನನ್ನು ಸೋಯಂ ಕಮ ಎಂದು ಗುರುತಿಸಲಾಗಿದ್ದು, ಈತ ಸಂಘಟನೆಯ ಕೋಂಟ ಪ್ರದೇಶದ ಸಮಿತಿ ಸದಸ್ಯನಾಗಿದ್ದ. ಘಟನೆಯ ಸ್ಥಳದಿಂದ ಒಂದು ಪಿಸ್ತೂಲ್, ಕೆಲವು ಸ್ಫೋಟಕಗಳು ಹಾಗೂ ದಿನಬಳಕೆಯ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ನಡೆದ ಹಲವು ನಕ್ಸಲ್ ದಾಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸೋಯಂನ ತಲೆಗೆ 5 ಲಕ್ಷ ರೂ. ಪುರಸ್ಕಾರ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನೈಗುಡ-ಚಿಂತಕೊಂಟದ ದಟ್ಟ ಅರಣ್ಯಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಪಡೆಯ ಸಿಬ್ಬಂದಿಗಳು ನಕ್ಸಲ್ ನಿಹ್ರಗಕ್ಕೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಆಗ ಭದ್ರತಾ ಪಡೆಗಳು ಪ್ರತ್ಯುತ್ತರ ನೀಡಿವೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಮೀನ ತಿಳಿಸಿದ್ದಾರೆ.





