ವಿವಾದ ಸೃಷ್ಟಿಸಿದ ಪುನೀತ್ ರಾಜ್ ಕುಮಾರ್-ಪ್ರಧಾನಿ ಮೋದಿ ಭೇಟಿ!

ಬೆಂಗಳೂರು, ಮೇ 3: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಗವು ಚುನಾವಣಾ ರಾಯಭಾರಿಯಾಗಿ ನೇಮಿಸಿದ್ದ ನಟ ಪುನೀತ್ ರಾಜ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿರುವುದು ಹೊಸ ವಿವಾದವನ್ನು ಸೃಷ್ಟಿಸಿದೆ.
ಚುನಾವಣಾ ಆಯೋಗ ನೇಮಿಸಿದ ರಾಯಭಾರಿಗಳು ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಹೊರತಾಗಿ ರಾಜಕೀಯ ಪಕ್ಷವೊಂದರ ಅಥವಾ ನಾಯಕರ ಜೊತೆ ಕಾಣಿಸಿಕೊಂಡರೆ ಅದು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.
ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿಯವರನ್ನು ಪುನೀತ್ ರಾಜ್ ಕುಮಾರ್ ಭೇಟಿಯಾಗಿದ್ದು, ಡಾ.ರಾಜ್ ಕುಮಾರ್ ಬಗೆಗಿನ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು.
ರಾಯಭಾರಿಯಾಗಿರುವ ಪುನೀತ್ ಪ್ರಧಾನಿಯನ್ನು ಭೇಟಿಯಾಗಿರುವುದು ಸರಿಯಲ್ಲ. ಇದು ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ?, ಪಕ್ಷದ ಪ್ರಚಾರಕ್ಕೆ ಬಂದಾಗ ರಾಯಭಾರಿಯು ಪ್ರಧಾನಿಯನ್ನು ಭೇಟಿಯಾಗಿದ್ದು ಸರಿಯೇ? ಎನ್ನುವ ಮಾತುಗಳು ಕೇಳಿಬರುತ್ತಿವೆ.







