ಬಿಜೆಪಿ ಆಡಳಿತದಲ್ಲಿ ದಲಿತರು-ಆದಿವಾಸಿಗಳ ಮೇಲೆ ದೌರ್ಜನ್ಯ: ಸುಶೀಲ್ ಕುಮಾರ್ ಶಿಂಧೆ

ಬೆಂಗಳೂರು, ಮೇ 3: ಬಿಜೆಪಿಯ ದಲಿತ ಮತ್ತು ಆದಿವಾಸಿ ವಿರೋಧಿ ಮನಃಸ್ಥಿತಿಯಿಂದಾಗಿ ಪರಿಶಿಷ್ಟ ಜಾತಿ, ಪಂಗಡಗಳನ್ನು ರಕ್ಷಿಸಬೇಕಾದ ಕಾಯ್ದೆ ದುರ್ಬಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸದಾ ಅಂಬೇಡ್ಕರ್ ಜಪ ಮಾಡುತ್ತಾರೆ. ಆದರೆ, ಅವರ ಪಕ್ಷದ ಕಿಡಿಗೇಡಿಗಳು ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿದಿನವೂ ದಲಿತರು ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದರು.
1989ರಲ್ಲಿ ಜಾರಿಗೆ ತಂದ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ಯನ್ನು ಕೇಂದ್ರ ಸರಕಾರ ಈಗ ದುರ್ಬಲಗೊಳಿಸಿದೆ. ಬಿಜೆಪಿಯ ಐದು ಸಂಸದರು ಈ ವಿಚಾರವಾಗಿ ಪ್ರಧಾನಿಗೆ ಪತ್ರ ಬರೆದು, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ತಾರತಮ್ಯದ ದೃಷ್ಟಿಯಿಂದ ನೋಡುತ್ತಿರುವುದಕ್ಕೆ ತೀವ್ರ ಅಸಮಾಧಾನ ಹೊರಾಕಿದರು ಎಂದು ಅವರು ಹೇಳಿದರು.
ಅಲ್ಲದೆ, ಕಳೆದ ನಾಲ್ಕು ವರ್ಷಗಳಲ್ಲಿ ಈ ವರ್ಗದ ಜನರಿಗೆ ಕಿಂಚಿತ್ತೂ ಒಳಿತನ್ನು ಮಾಡಿಲ್ಲ ಎಂದು ಹೇಳಿದ್ದರು. ಬಿಜೆಪಿಯ ಸಂಸದರೇ ಹೀಗೆ ಮಾತನಾಡಿದರೆಂದರೆ, ಮೋದಿ ಸರಕಾರದಲ್ಲಿ ದಲಿತರ ಸ್ಥಿತಿಗತಿ ಎಷ್ಟೊಂದು ಹೀನಾಯವಾಗಿದೆ ಎನ್ನುವುದನ್ನು ಯಾರಾದರೂ ಊಹಿಸಿಕೊಳ್ಳಬಹುದು ಎಂದು ಶಿಂಧೆ ಹೇಳಿದರು.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ(43.4), ರಾಜಸ್ಥಾನ(42), ಗೋವಾ(36.7) ಮತ್ತು ಗುಜರಾತಿನಲ್ಲಿ(32.5) ದಲಿತರ ವಿರುದ್ಧ ಅತ್ಯಧಿಕ ಪ್ರಮಾಣದ ದೌರ್ಜನ್ಯಗಳು ನಡೆದಿವೆ. ಬಿಜೆಪಿ ಆಡಳಿತದ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಆದಿವಾಸಿಗಳ ವಿರುದ್ಧದ ದೌರ್ಜನ್ಯಗಳು ಕಳವಳಕಾರಿ ಪ್ರಮಾಣದಲ್ಲಿ ನಡೆಯುತ್ತಿವೆ. ಹೈದರಾಬಾದ್‌ನ ರೋಹಿತ್ ವೇಮುಲಾ ಪ್ರಕರಣದಲ್ಲೂ ಅದೇ ನಡೆಯಿತು. ಇಲ್ಲಿಯವರೆಗೆ ಪ್ರಕರಣದ ವಿಚಾರಣೆ ನಡೆದಿಲ್ಲ ಎಂದು ಅವರು ದೂರಿದರು.
ಉತ್ತರಪ್ರದೇಶದ ಸಿಎಂ ಆದಿತ್ಯನಾಥ್ ಅಲ್ಲಿನ ಬಡ ಕುಟುಂಬವನ್ನು ಭೇಟಿ ಮಾಡುವ ಮುನ್ನ ಅವರಿಗೆ ಸಾಬೂನು ಹಾಕಿ ಸ್ನಾನ ಮಾಡಿಸಿ, ಸುಗಂಧದ್ರವ್ಯ ಸಿಂಪಡಿಸಿದ್ದರು. ಗುಜರಾತಿನ ಊನಾದಲ್ಲಿ ದಲಿತ ಸಮುದಾಯದ ನಾಲ್ವರು ಯುವಕರಿಗೆ ಛಡಿ ಏಟು ಕೊಟ್ಟು, ಸಾರ್ವಜನಿಕವಾಗಿ ರಸ್ತೆಯ ಮೇಲೆ ಅಮಾನುಷವಾಗಿ ಎಳೆದುಕೊಂಡು ಹೋಗಲಾಗಿದೆ ಎಂದು ಶಿಂಧೆ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಮುದಾಯದ ಬಾಲಕಿ ಡೆಲ್ಟಾ ಮೇಘವಾಲ್ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿಂದೆಯೂ ಇದೇ ಶಕ್ತಿಗಳಿವೆ. ಕೇಂದ್ರ ಸಚಿವ ವಿ.ಕೆ.ಸಿಂಗ್ ಕೆಲ ತಿಂಗಳ ಹಿಂದೆ ದಲಿತರ ಮಕ್ಕಳನ್ನು ನಾಯಿಗಳಿಗೆ ಹೋಲಿಸಿದ್ದರು ಎಂದು ಅವರು ಕಿಡಿಗಾರಿದರು.
ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವು ಎಸ್ಸಿ-ಎಸ್ಟಿ ಮತ್ತು ಇತರ ದುರ್ಬಲ ವರ್ಗಗಳ ಸಬಲೀಕರಣಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡಿದೆ. ರಾಜ್ಯದಲ್ಲಿ ಎಸ್ಸಿ-ಎಸ್ಟಿ ಹೊಂದಿರುವ ಜನಸಂಖ್ಯೆಗೆ ತಕ್ಕಂತೆ ರಾಜ್ಯ ಮುಂಗಡ ಪತ್ರದಲ್ಲಿ ಶೇ.24.10ರಷ್ಟು ಅನುದಾನವನ್ನು ಮೀಸಲಿಟ್ಟಿದೆ ಎಂದು ಅವರು ತಿಳಿಸಿದರು.
ಎಐಸಿಸಿ ಪ್ರಧಾನ ಕಾಯದರ್ಶಿ ಮುಕುಲ್ ವಾಸ್ನಿಕ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಪ್ರತಿ 12 ನಿಮಿಷಕ್ಕೊಮ್ಮೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಪ್ರತಿದಿನ ದಲಿತ ಸಮುದಾಯದ ಆರು ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. 2018ರಲ್ಲಿ 50 ಸಾವಿರ ಪ್ರಕರಣಗಳು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲಾಗಿದೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2010ರಲ್ಲಿ ಪರಿಶಿಷ್ಟ ಜಾತಿಗಳ ಉಪಯೋಜನೆಗಳ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಶೇ.4.63ರಷ್ಟು ಹಣವನ್ನು ಮೀಸಲಿಡಬೇಕೆಂಬ ‘ನರೇಂದ್ರ ಜಾಧವ್ ಸಮಿತಿ’ಯ ಶಿಫಾರಸ್ಸನ್ನು ಜಾರಿಗೆ ತರಲಾಗಿತ್ತು. ಆದರೆ, ಮೋದಿ ಸರಕಾರವು ಈ ನಿಯಮವನ್ನೆ ರದ್ದುಪಡಿಸಿತು. ಹೀಗಾಗಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಮೀಸಲಿಡುತ್ತಿದ್ದ ಹಣದ ಪ್ರಮಾಣವು 2017-18ರಲ್ಲಿ ಶೇ.2.5ಕ್ಕೆ ಇಳಿದಿದೆ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿಯವರಿಗೆ ನೀಡುತ್ತಿದ್ದ ಸಾಲ ಖಾತ್ರಿ ಯೋಜನೆಯಡಿಯಲ್ಲಿ 2016-17ರಲ್ಲಿ 10 ಕೋಟಿ ರೂ.ಒದಗಿಸಲಾಗಿತ್ತು. ಆದರೆ, ಖರ್ಚು ಮಾಡಿದ್ದು 1 ಲಕ್ಷ ರೂ.ಮಾತ್ರ. ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರಿಗಾಗಿ 2014-15ರಲ್ಲಿ 439 ಕೋಟಿ ರೂ., 2015-16ರಲ್ಲಿ 461 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಆದರೆ, ಒಂದು ರೂ.ಗಳನ್ನು ಖರ್ಚು ಮಾಡಿಲ್ಲ ಎಂದು ಮುಕುಲ್ ವಾಸ್ನಿಕ್ ದೂರಿದರು.
ದಲಿತರು ಮತ್ತು ಆದಿವಾಸಿಗಳ ಪರವಾಗಿ ಕೆಲಸ ಮಾಡುವ ರಾಜಕೀಯ ಇಚ್ಛಾಶಕ್ತಿಯೆ ಇಲ್ಲದಿರುವುದು, ಸಾಮಾಜಿಕ ಶೋಷಣೆ, ಆರ್ಥಿಕ ನಿರ್ಲಕ್ಷ, ದುರ್ಬಲ ವರ್ಗಗಳ ಹಕ್ಕುಗಳ ಉಲ್ಲಂಘನೆ, ಅನ್ಯಾಯ, ಸಾಮಾಜಿಕ ವಿಭಜನೆ, ಸಾಮಾಜಿಕ ಸಾಮರಸ್ಯವನ್ನು ಕದಡುವುದು, ಶಾಂತಿ ಮತ್ತು ಸೌಹಾರ್ದವನ್ನು ಹಾಳು ಮಾಡುವುದು ಮೋದಿ ಸರಕಾರದ ನೀತಿಗಳ ಹೆಗ್ಗುರುತುಗಳಾಗಿವೆ ಎಂದು ಅವರು ಹೇಳಿದರು.
ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಪ್ರಬುದ್ಧ ಮತದಾರರು ಬಿಜೆಪಿಯ ಈ ಕುತಂತ್ರಗಳಿಗೆ ತಕ್ಕ ಉತ್ತರ ನೀಡಿ, ಬಿಜೆಪಿಗೆ ಮರೆಯಲಾರದಂತಹ ಪಾಠ ಕಲಿಸಲಿದ್ದಾರೆ ಎಂದು ಮುಕುಲ್ ವಾಸ್ನಿಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಮಾಧ್ಯಮ ವಿಭಾಗದ ಸಂಚಾಲಕಿ ಪ್ರಿಯಾಂಕಾ ಚತುರ್ವೇದಿ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಈ.ರಾಧಾಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮೋದಿಗೆ ಮಾಹಿತಿ ಕೊರತೆ
ದಲಿತ ಸಮುದಾಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಬೇಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಶೀಲ್‌ಕುಮಾರ್ ಶಿಂಧೆ, ದಲಿತನಾದ ನನ್ನನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಸೂಕ್ತ ಸಮಯದಲ್ಲಿ ದಲಿತ ಮುಖಂಡರಿಗೆ ಕಾಂಗ್ರೆಸ್ ಸ್ಥಾನಮಾನ ನೀಡಿದೆ. ಮೋದಿ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಮಾಹಿತಿಯ ಕೊರತೆಯಿದೆ.







